ನಾಡಿನಲ್ಲೇ ಉಳಿಯುತ್ತಿವೆ ಹುಲಿ, ಚಿರತೆಗಳು

Published on

ಗುಂಡ್ಲುಪೇಟೆ: ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ವನ್ಯಜೀವಿಗಳು ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಬಂಡೀಪುರ ಅರಣ್ಯದಿಂದ ದೂರವಿರುವ ಗ್ರಾಮಗಳಲ್ಲಿಯೂ ಹುಲಿ, ಚಿರತೆಗಳು ಕಾಣಿಸಿಕೊಳ್ಳುವ ಮೂಲಕ ಭೀತಿಯುಂಟು ಮಾಡುತ್ತಿವೆ.

ಆರೇಳು ತಿಂಗಳಿನಿಂದ ತೆರಕಣಾಂಬಿ ಸೆಕ್ಷನ್ 4ಕ್ಕೆ ಸೇರಿದ ಗುಡ್ಡದಲ್ಲಿ ನೆಲೆಸಿರುವ ಹುಲಿ ನೆರೆಯ ಕಗ್ಗಳದಹುಂಡಿ, ಕಗ್ಗಳ, ಮಲ್ಲಮ್ಮನಹುಂಡಿ, ಬೆರಟಹಳ್ಳಿ, ಕೆಲಸೂರು, ಪಡಗೂರು, ಕಲ್ಲಹಳ್ಳಿ ಮುಂತಾದ ಗ್ರಾಮಗಳ ಜಮೀನುಗಳಲ್ಲಿ ಸಂಚರಿಸುತ್ತಾ ರೈತರ ಭೀತಿಗೆ ಕಾರಣವಾಗಿದೆ. ಕಡತಾಳಕಟ್ಟೆ ಹುಂಡಿ ಗ್ರಾಮದ ಶಿವಕುಮಾರ್ ಅವರ ಬಾಳೆ ತೋಟದಲ್ಲಿ ಮೂರು ಚಿರತೆಗಳು ಬೀಡುಬಿಟ್ಟು ಜಾನುವಾರುಗಳನ್ನು ಕೊಂದು ಹಾಕುತ್ತಿವೆ.ಭಾನುವಾರ ಮುಂಜಾನೆ ಕಗ್ಗಳ ಗ್ರಾಮದ ಮಂಜುನಾಥ್ ಎಂಬುವರ ಜಮೀನಿನಲ್ಲಿ ಭಾರಿ ಗಾತ್ರದ ಹುಲಿಯ ಹೆಜ್ಜೆಗಳನ್ನು ಕಂಡ ರೈತರು ಹಾಗೂ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.

2017-18ರಲ್ಲಿ ಬಂಡೀಪುರ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಕಾಡಿನಿಂದ ಹೊರಬಂದ ಹುಲಿ, ಚಿರತೆಗಳು ಕಾಡಂಚಿನ ಗ್ರಾಮಗಳ ವ್ಯಾಪ್ತಿಯಲ್ಲಿ ನೆಲೆಸಿವೆ. ಬಫರ್ ವಲಯದ ಗುಡ್ಡಗಳು, ಕುರುಚಲು ಪ್ರದೇಶ ಹಾಗೂ ಹಳ್ಳಕೊಳ್ಳಗಳಲ್ಲಿ ಆವರಿಸಿರುವ ಪೊದೆಗಳಲ್ಲಿ ಆಶ್ರಯ ಪಡೆದಿವೆ. ಅಲ್ಲದೆ ಕಳೆದ ಆರೇಳು ವರ್ಷಗಳ ಅವಧಿಯಲ್ಲಿ ಕಾಡಿನಿಂದ ದೂರವಿರುವ ಪ್ರದೇಶದಲ್ಲಿಯೂ ಕಾಣಿಸುತ್ತಿವೆ. ಆಗಾಗ್ಗೆ ರೈತರ ಸಾಕುಪ್ರಾಣಿಗಳು ಹಾಗೂ ಕಾಡಿನಿಂದ ಹೊರಗಿರುವ ಜಮೀನುಗಳಲ್ಲಿ ಬೀಡುಬಿಟ್ಟಿದ್ದ ಕಾಡುಹಂದಿಗಳನ್ನು ಬೇಟೆಯಾಡುತ್ತಾ ಕಬ್ಬಿನ ತೋಟಗಳು ಹಾಗೂ ಬಾಳೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಇದರಿಂದ ಭೀತಿಗೊಳಗಾದ ರೈತರು ತಮ್ಮ ಜಮೀನುಗಳಿಗೆ ಹೋಗಲು ಹೆದರುವಂತಾಗಿದೆ. ಜಮೀನುಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆ ಚಿರತೆ ಹಾಗೂ ಹುಲಿಗಳನ್ನು ಸೆರೆಹಿಡಿದು ಕಾಡಿಗೆ ಬಿಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net