

ಗುಂಡ್ಲುಪೇಟೆ: ತಾಲೂಕಿನ ಕೊಡಗಾಪುರ ಸಮೀಪ ವಿದ್ಯುತ್ ತಂತಿ ಸ್ಪರ್ಶಿಸಿ ಮರದ ಮೇಲೆಯೇ ಚಿರತೆ ಮೃತಪಟ್ಟಿದೆ.
ವಿಷಯ ತಿಳಿದ ಬಫರ್ ವಲಯದ ವಲಯಾರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್ ಹಾಗೂ ಸಿಬ್ಬಂದಿ ಶುಕ್ರವಾರ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಗ್ರಾಮದ ಕಲ್ಲಿಗಣ್ಣಸ್ವಾಮಿ ಅವರ ಜಮೀನಿನಲ್ಲಿರುವ ಮರದ ಮೇಲಿದ್ದ 6 ತಿಂಗಳ ಹೆಣ್ಣುಚಿರತೆ ವಿದ್ಯುತ್ ಲೈನ್ ಹಾದು ಹೋಗಿರುವ ತಂತಿ ಸ್ಪರ್ಷಿಸಿಮೃತಪಟ್ಟಿರುವುದು ಪತ್ತೆಯಾಗಿದೆ.
ಬಂಡೀಪುರ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರ ನಿರ್ದೇಶನದ ಮೇರೆಗೆ ಚಿರತೆ ಕಳೇಬರವನ್ನು ಮದ್ದೂರು ವಲಯದ ಹೊಸಕೆರೆ ಕಾರೇಮಾಳ ಪ್ರದೇಶಕ್ಕೆ ಕೊಂಡೊಯ್ಯಲಾಯಿತು. ಅರಣ್ಯ ಇಲಾಖೆಯ ಪಶುವೈದ್ಯ ಡಾ.ವಾಸಿಂ ಮಿರ್ಜಾ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸುಟ್ಟು ಹಾಕಲಾಯಿತು.