ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ

19-GPT-5
Published on

ಗುಂಡ್ಲುಪೇಟೆ; ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಬಿನಿ ನದಿಯಿಂದ ತಾಲೂಕಿನ 145 ಗ್ರಾಮಗಳಿಗೆ ಕುಡಿವ ನೀರು ಪೂರೈಸುವ ಪಂಪ್‌ಹೌಸ್ ನೀರಿನಲ್ಲಿ ಮುಳುಗಡೆಯಾಗಿರುವುದರಿಂದ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಕೇರಳದ ವೈನಾಡಿನಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ನಿತ್ಯ ಕಬಿನಿ ಡ್ಯಾಮ್‌ನಿಂದ ಸುಮಾರು 75 ರಿಂದ 80 ಸಾವಿರ ಹಾಗೂ ನುಗು ಡ್ಯಾಮ್‌ನಿಂದ 10 ಸಾವಿರ ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಪರಿಣಾಮ ಹುಲ್ಲಹಳ್ಳಿ ಕಬಿನಿ ನದಿಯ ದಡದಲ್ಲಿರುವ ಜಾಕ್‌ವೆಲ್ ಮತ್ತು ನೀರು ಶುದ್ಧಿಕರಣ ಘಟಕ ಭಾಗಶಃ ಮುಳುಗಡೆಯಾಗಿದೆ. ಆದ್ದರಿಂದ ಜು. 18 ರಿಂದ ಸುಮಾರು 30 ರಿಂದ 45 ದಿನ ಕುಡಿಯುವ ನೀರು ಸರಬರಾಜಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸದರಿ ಗ್ರಾಮದಳಿಗೆ ಆಯಾ ಗ್ರಾಮ ಪಂಚಾಯಿತಿಗಳು ಪರ್ಯಾಯವಾಗಿ ಲಭ್ಯವಿರುವ ಬೋರ್‌ವೆಲ್‌ಗಳ ಮೂಲಕ ನೀರು ಸರಬರಾಜು ಮಾಡಲಿವೆ. ಆದ್ದರಿಂದ ಸಾರ್ವಜನಿಕರು ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯುವುದರ ಜತೆಗೆ ನೀರನ್ನು ಮಿತವಾಗಿ ಬಳಸುವಂತೆ ಕೋರಿದ್ದಾರೆ.

ಪಟ್ಟಣಕ್ಕೂ ಕೊಳವೆ ಬಾವಿ ನೀರು
ಪಟ್ಟಣಕ್ಕೆ ಕುಡಿವ ನೀರು ಸರಬರಾಜು ಮಾಡುವ ದೇಬೂರು ಪಂಪ್ ಹೌಸ್‌ಗೂ ನೀರು ನುಗ್ಗಿರುವುದರಿಂದ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ನಂಜನಗೂಡು ತಾಲೂಕಿನ ದೇಬೂರು ಬಳಿಯಿರುವ ಪಂಪ್ ಹೌಸ್ ಹಾಗೂ ಜಾಕ್‌ವೆಲ್ ಸಹಾ ನೀರಿನಲ್ಲಿ ಮುಳುಗಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗುವವರೆಗೂ ಕಬಿನಿ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಎಲ್ಲ ಬಡಾವಣೆಗಳಿಗೂ ಆಯಾ ಕೊಳವೆ ಬಾವಿಗಳಿಂದಲೇ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಪುರಸಭೆ ಕುಡಿಯುವ ನೀರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net