

ಗುಂಡ್ಲುಪೇಟೆ: ಹೆಣ್ಣುಮಕ್ಕಳ ಹಕ್ಕು ರಕ್ಷಣೆ ಹಾಗೂ ಅವರ ಮೇಲಿನ ದೌರ್ಜನ್ಯ ತಪ್ಪಿಸಲು ಸರ್ಕಾರ ಪೋಕ್ಸೋ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೊಳಿಸಿದ್ದು, ಇವುಗಳ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಸವರಾಜ ತಳವಾರ್ ಹೇಳಿದರು.
ತಾಲೂಕಿನ ಹಂಗಳ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ಶಿಬಿರದಲ್ಲಿ ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನಕ್ಷರಸ್ಥರು ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ಹಾಗೂ ಬಡತನ ಕಾರಣಗಳಿಂದ ಅಪ್ರಾಪ್ತ ಹೆಣ್ಣುಮಕ್ಕಳನ್ನು ಮದುವೆ ಮಾಡುವುದರಿಂದ ಹೆಣ್ಣು ಮಕ್ಕಳು ಹಲವಾರು ರೀತಿಯ ತೊಂದರೆಗೊಳಗಾಗುತ್ತಿದ್ದಾರೆ. ಆದ್ದರಿಂದ ಎಲ್ಲರಿಗೂ ಕಾನೂನಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ದೇಶದ ಎಲ್ಲ ಕಾನೂನು ಸಂವಿಧಾನ ಅಡಿಯಲ್ಲೇ ಬರುವುದರಿಂದ ಎಲ್ಲರೂ ಇದರ ಬಗ್ಗೆ ಹೆಚ್ಚಿನ ಅರಿವು ಹೊಂದಬೇಕು ಎಂದು ಹೇಳಿದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜೆ.ಜೆ.ಶಿವಕುಮಾರ್, ಉಪನ್ಯಾಸಕ ದೀಪಕ್ ಕುಮಾರ್, ಅನಿಲ್ ಕುಮಾರ್, ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.