

ಗುಂಡ್ಲುಪೇಟೆ; ಕಳೆದ ವಾರ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗೆ ಜಿಲ್ಲೆಯ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಕೊಟ್ಟಿದ್ದ ಮನವಿ ಪತ್ರಗಳನ್ನು ಕಸದ ಬುಟ್ಟಿಗೆ ಎಸೆದು ರೈತರಿಗೆ ದ್ರೋಹ ಮಾಡಿರುವ ಸಿದ್ದರಾಮಯ್ಯ ರೈತರಿಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ಸಾಮೂಹಿಕ ರೈತ ಸಂಘದ ಕಾರ್ಯಕರ್ತರು ಭಾನುವಾರ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಪರಿಣಾಮ ರೈತ ಸಂಕುಲ ತುಂಬ ಸಂಕಷ್ಟದಲ್ಲಿದೆ. ಕಳೆದ ಬಾರಿ ಕಾಡಿದ ಬರಗಾಲ ಹಾಗೂ ಅಧಿಕ ಮಳೆಯಿಂದ ರೈತರು ತುಂಬ ತೊಂದರೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲೆಯ ರೈತರ ನಾನಾ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿದ ಮನವಿಪತ್ರವನ್ನು ಖುದ್ದಾಗಿ ಮುಖ್ಯಮಂತ್ರಿ ಕೈಗೆ ಕೊಟ್ಟಿದ್ದರೂ ಕಸದ ತೊಟ್ಟಿಗೆ ಬಿಸಾಡುವ ಮೂಲಕ ರೈತರ ಬಗ್ಗೆ ತಮಗೆ ಇರುವ ಭಾವನೆಯನ್ನು ಪ್ರದರ್ಶಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಕ್ಷಮೆ ಕೋರಬೇಕು. ಅಲ್ಲಿಯವರೆಗೆ ಅವರ ಎಲ್ಲ ಕಾರ್ಯಕ್ರಮಗಳನ್ನು ಬಹಿಷ್ಕರಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿಮಂದಿರದಲ್ಲಿ ಸಭೆ ನಡೆಸಿ ಸಿದ್ದರಾಮಯ್ಯ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ತಾಲೂಕು ಅಧ್ಯಕ್ಷ ನಾಗಪ್ಪ, ಷಣ್ಮುಖಸ್ವಾಮಿ, ಗಣೇಶ್, ಪುಟ್ಟೇಗೌಡ, ಮಹೇಶ್, ಶ್ರೀನಿವಾಸ್, ಸಿದ್ದರಾಜು, ಲೋಕೇಶ್ ಹಾಗೂ ಇತರರು ಇದ್ದರು.