

ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ
ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಬಂಡೀಪುರ ಹಚ್ಚಹಸುರಿನಿಂದ ಕಂಗೊಳಿಸುತ್ತಿದ್ದು ಬೇಸಿಗೆಯಲ್ಲಿ ವಲಸೆ ಹೋಗಿದ್ದ ವನ್ಯಜೀವಿಗಳು ಹಿಂದಿರುಗಿದ್ದರಿಂದ ಅರಣ್ಯಕ್ಕೆ ಜೀವಕಳೆ ಮರುಕಳಿಸಿದೆ.
ಕಳೆದ ವರ್ಷ ಮಳೆಯ ಕೊರತೆ ಹಾಗೂ ಬಿರುಬಿಸಿಲಿನಿಂದ ಕೂಡಿದ್ದ ಬೇಸಿಗೆಯಲ್ಲಿ ಬಸವಳಿದ್ದಿದ್ದ ಬಂಡೀಪುರಕ್ಕೆ ಪೂರ್ವ ಮುಂಗಾರು ಮಳೆ ಬಿದ್ದ ಪರಿಣಾಮ ಅರಣ್ಯ ಪ್ರದೇಶವು ಹಸಿರಿನಿಂದ ಕಂಗೊಳಿಸುತ್ತಿದೆ. ರಸ್ತೆ ಬದಿಗಳಲ್ಲಿ ಗುಂಪುಗುಂಪಾಗಿ ಹುಲ್ಲು ಮೇಯುತ್ತಿರುವ ಚುಕ್ಕೆ ಜಿಂಕೆಗಳು ನವಿಲುಗಳು ಪ್ರವಾಸಿಗರಿಗೆ ಮುದನೀಡುತ್ತಿವೆ.
ಕಳೆದ ಬೇಸಿಗೆಯಲ್ಲಿ ಕೆರೆಕಟ್ಟೆಗಳು ಬತ್ತಿಹೋಗಿದ್ದರಿಂದ ಮೇವು ನೀರು ಹುಡುಕಿಕೊಂಡು ಕಬಿನಿ ಹಿನ್ನೀರು, ಮೋಯಾರ್‌ಗಳತ್ತ ವಲಸೆ ಹೋಗಿದ್ದ ಆನೆ ಹಾಗೂ ಕಾಟಿಗಳು ವಾಪಸಾಗಿದ್ದು ಎಲ್ಲಿ ನೋಡಿದರೂ ಹಿಂಡುಹಿಂಡಾಗಿ ಸಂಚರಿಸುತ್ತಾ ಅರಣ್ಯಕ್ಕೆ ಜೀವಕಳೆ ತಂದಿವೆ. ಹಿಂಡು ಹಿಂಡಾಗಿ ರಸ್ತೆದಾಟುತ್ತಿರುವ ಕಾಟಿ ಹಾಗೂ ಆನೆಗಳು ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರ ಮೈಜುಮ್ಮೆನ್ನಿಸುತ್ತವೆ. ದೊಡ್ಡಮರಗಳ ಮೇಲೆ ಮಲಗಿರುವ ಚಿರತೆಗಳು ನೋಡುಗರನ್ನು ಸೆಳೆಯುತ್ತಿದೆ. ಅರಣ್ಯ ಪ್ರದೇಶದೊಳಗಿನ ಕೆರೆಗಳ ಬಳಿಯಲ್ಲಿ ಕಂಡುಬರುವ ಹುಲಿಗಳು ಪ್ರವಾಸಿಗರ ಸಂಖ್ಯೆ ಹೆಚ್ಚಲು ಕಾರಣವಾಗಿವೆ.
ನಿತ್ಯವೂ ಒಂದಲ್ಲಾ ಒಂದುಕಡೆ ವನ್ಯ ಪ್ರಾಣಿಗಳ ದರ್ಶನ ದೊರಕುತ್ತಿದೆ. ಕೆರೆಗಳಲ್ಲಿ ಆನೆಗಳ ಹಿಂಡು ಜಲ ಕ್ರೀಡೆಯಲ್ಲಿ ತೊಡಗಿರುವುದನ್ನು ಪ್ರವಾಸಿಗರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿರುವುದು ಪ್ರವಾಸಿಗರ ಸಂಖ್ಯೆ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಿದೆ. ಅತ್ಯಧಿಕ ಪ್ರವಾಸಿಗರ ಭೇಟಿ, ಹೆಚ್ಚುವರಿ ವಾಹನ ಖರೀದಿ:ಉದ್ಯಾನವನಕ್ಕೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಶನಿವಾರ ಭಾನುವಾರ ಹಾಗೂ ರಜಾ ದಿನಗಳಲ್ಲಿ 900 ರಿಂದ 1000 ಜನರು ಆಗಮಿಸುವುದರಿಂದ ಅರಣ್ಯ ಇಲಾಖೆ ಸಫಾರಿ ಒಂದರಿಂದಲೇ ಪ್ರತಿ ದಿನ ಲಕ್ಷಾಂತರ ರೂ. ಆದಾಯ ಗಳಿಸುತ್ತಿದೆ. ಸಫಾರಿಗೆ ಕರೆದೊಯ್ಯಲು ಸದ್ಯ ಅರಣ್ಯ ಇಲಾಖೆಯ ಬಳಿ 30 ಸೀಟ್ ಸಾಮರ್ಥ್ಯದ 7 ಬಸ್, 5 ಜಿಪ್ಸಿ ಹಾಗೂ 4 ಕ್ಯಾಂಪರ್‌ಗಳಿವೆ. ಇಷ್ಟಿದ್ದರೂ ರಜೆ ದಿನಗಳಲ್ಲಿ ಪ್ರವಾಹದಂತೆ ಆಗಮಿಸುವ ಪ್ರವಾಸಿಗರನ್ನು ಸಫಾರಿಗೆ ಕಳಿಸಲು ಸಾಧ್ಯವಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಬಂಡೀಪುರ ಯುವಮಿತ್ರ ಯೋಜನೆಯ ಎರಡು ಬಸ್‌ಗಳನ್ನು ಬಳಕೆ ಮಾಡಿಕೊಂಡರೂ ಸಾಕಾಗುತ್ತಿಲ್ಲ. ಜುಲೈ 13ರ ಶನಿವಾರ ಸಂಜೆ ಸುಮಾರು 100ಕ್ಕೂ ಹೆಚ್ಚಿನ ಪ್ರವಾಸಿಗರು ಸಫಾರಿಗೆ ಹೋಗಲಾಗದೆ ವಾಪಸಾಗಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹೊಸದಾಗಿ ಎರಡು ಬಸ್‌ಗಳನ್ನು ಖರೀದಿಸುತ್ತಿದೆ.
ಎರಡು ಬಾರಿ ಸಫಾರಿ: ಬಂಡೀಪುರದಲ್ಲಿ ಪ್ರತಿದಿನ ಬೆಳಗ್ಗೆ 6 ರಿಂದ 9 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆ ನಡುವೆ ಎರಡು ಬಾರಿ ಸಫಾರಿ ನಡೆಸಲಾಗುತ್ತದೆ. ಇಲ್ಲಿ ಎರಡು ರೀತಿಯ ಸಫಾರಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಬಸ್ ಹಾಗೂ ಜೀಪ್ ವ್ಯವಸ್ಥೆ ಇದೆ. ಬಸ್‌ನಲ್ಲಿ 1 ಗಂಟೆಯ ಅವಧಿಯ ಸಫಾರಿಗೆ ಒಮ್ಮೆಲೆ ಹೆಚ್ಚಿನ ಜನರು ಹೋಗಬಹುದಾಗಿದೆ. ಜೀಪ್‌ಗಳಲ್ಲಿ ತೆರಳುವವರು ಸುಮಾರು 2 ಗಂಟೆಗಳ ಕಾಲ ಸಫಾರಿ ಮಾಡಬಹುದಾಗಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಬಳಿಕ ಬಂಡೀಪುರ ರಾಷ್ಟ್ರೀಯ ಉದ್ಯಾನ ಈಗ ಮತ್ತಷ್ಟು ಕಳೆಗಟ್ಟಿದೆ. ಪ್ರತಿ ದಿನವೂ ಇಲ್ಲಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು ಕೋಟ್ಯಂತರ ರೂ. ಆದಾಯ ತರುತ್ತಿದೆ. 2023ರ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಂಡಿಪುರದಲ್ಲಿ ಸಫಾರಿ ನಡೆಸಿದ್ದರು. ಪ್ರಾಜೆಕ್ಟ್ ಟೈಗರ್‌ನ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಹುಲಿ ಸಂರಕ್ಷಣೆ ಸಂಬಂಧಿತ ಕಾರ್ಯಕ್ರಮ ಮತ್ತು ಹುಲಿ ಗಣತಿ ಬಿಡುಗಡೆ ಸೇರಿದಂತೆ ಹಲವು ಕಾರಣಗಳಿಂದ ಆಗಮಿಸಿದ್ದ ವೇಳೆ ಮೋದಿ ಸುಮಾರು 2 ಗಂಟೆ ಕಾಲ ಉದ್ಯಾನವನದಲ್ಲಿ ಸಫಾರಿ ನಡೆಸಿದ್ದರು. ನಂತರ ಮಧುಮಲೈಗೆ ತೆರಳಿ ಆನೆ ಮಾವುತ ಬೊಮ್ಮ-ಬೆಳ್ಳಿ ದಂಪತಿಯನ್ನು ಭೇಟಿ ಮಾಡಿದ್ದರು.
ಮೇ ತಿಂಗಳಿನಲ್ಲಿ ಅತಿ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದರಿಂದ ಕೋಟ್ಯಂತರ ರೂ. ಆದಾಯ ಸಂಗ್ರಹವಾಗಿದೆ. ಹೆಚ್ಚಿನ ಪ್ರವಾಸಿಗರು ಆಗಮಿಸಿದರೆ ಬಂಡೀಪುರ ಯುವ ಮಿತ್ರ ಯೋಜನೆಯ ಬಸ್‌ಗಳನ್ನೂ ಕಳಿಸಲಾಗುತ್ತಿದೆ. ವಾಹನಗಳ ಕೊರತೆಯಿಂದ ಪ್ರವಾಸಿಗರಿಗೆ ಸಫಾರಿ ತಪ್ಪಬಾರದು ಎಂಬ ಕಾರಣಕ್ಕೆ ಹೊಸದಾಗಿ ಎರಡು ವಾಹನಗಳನ್ನು ಖರೀದಿಸಲಾಗಿದ್ದು ಸದ್ಯದಲ್ಲಿಯೇ ಬಳಕೆಗೆ ಬರಲಿವೆ.ಮಂಜುನಾಥ್ಗೋಪಾಲಸ್ವಾಮಿ ಬೆಟ್ಟ ವಲಯದ ಆರ್‌ಎಫ್‌ಒ