ಗುಂಡ್ಲುಪೇಟೆ: ತಾಲೂಕಿನ ಬೇಗೂರು ಗ್ರಾಮಪಂಚಾಯಿತಿಯ ನಿರ್ಲಕ್ಷ್ಯದಿಂದ ಬೆಳಚಲವಾಡಿ ಗ್ರಾಮದ ಶಾಲೆಯ ಎದುರಿನ ರಸ್ತೆಯಲ್ಲಿ ಕೊಳಚೆ ನೀರು ನಿಲ್ಲುತ್ತಿದ್ದು, ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯುಂಟಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ಡೆಂಘೆ ಜ್ವರದ ಆತಂಕವಿದ್ದರೂ ಬೇಗೂರು ಗ್ರಾಮಪಂಚಾಯಿತಿ ಮಾತ್ರ ಶುಚಿತ್ವಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ಗ್ರಾಮದ ಎಲ್ಲ ಚರಂಡಿಗಳಲ್ಲಿಯೂ ಹೂಳು ತುಂಬಿಕೊಂಡಿದ್ದರೂ ಅದನ್ನು ತೆರವುಗೊಳಿಸದ ಪರಿಣಾಮ ಕೊಳಚೆ ನೀರು ರಸ್ತೆ ನಡುವೆಯೇ ಮಡುಗಟ್ಟಿ ನಿಲ್ಲುತ್ತಿದೆ. ಇದರಿಂದ ಗ್ರಾಮದಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರುಗಿರುವ ರಸ್ತೆಯ ನಡುವೆ ನೀರು ನಿಂತು ಸೊಳ್ಳೆಗಳ ಉಗಮತಾಣವಾಗಿದೆ. ಅಲ್ಲದೆ, ಶಾಲೆಗೆ ಹೋಗುವ ಮಕ್ಕಳು ಹಾಗೂ ರಸ್ತೆಯಲ್ಲಿ ಓಡಾಡುವ ಪಾದಚಾರಿಗಳು ಕೊಳಚೆ ನೀರನ್ನು ದಾಟಿಕೊಂಡು ಹೋಗುವಂತಾಗಿದೆ. ಇತ್ತೀಚೆಗೆ ಶಾಲೆಗೆ ಹೋಗುವ ಮಕ್ಕಳು ಸೊಳ್ಳೆ ಕಡಿತದಿಂದ ಅನಾರೋಗ್ಯಕ್ಕೊಳಗಾಗುತ್ತಿದ್ದಾರೆ. ಇದರಿಂದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂಜರಿಯುವಂತಾಗಿದೆ.
ಈ ಬಗ್ಗೆ ಹಲವಾರು ಬಾರಿ ಗ್ರಾಮಪಂಚಾಯಿತಿಗೆ ದೂರು ನೀಡಿದ್ದರೂ ಯಾವುದೇ ಉಪಯೋಗವಾಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟವರು ಗ್ರಾಮದ ರಸ್ತೆಗಳಲ್ಲಿ ಕೊಳಚೆ ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಮಹದೇವಪ್ಪ ಒತ್ತಾಯಿಸಿದ್ದಾರೆ.