

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಕರಿಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಗುರುವಾರ ಆಳವಾದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾನೆ.
ಚಾಮರಾಜನಗರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸೇರಿದ ಕ್ವಾರಿಯಲ್ಲಿ ಕಳೆದ ಮೂರು ವರ್ಷಗಳಿಂದ ಕಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದ ಚಂದಕವಾಡಿ ಸಮೀಪದ ಕುರುಬರಹುಂಡಿ ಗ್ರಾಮದ ರಘು(39) ಮೃತರು. ತೆರಕಣಾಂಬಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಈಶ್ವರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ನೂರು ಅಡಿ ಆಳದ ಕಂದಕದ ಬಂಡೆಯ ಮೇಲೆ ಬಿದ್ದಿದ್ದ ಶವವನ್ನು ಮೇಲೆತ್ತಲು ಪೊಲೀಸರು ಹರಸಾಹಸ ಮಾಡಿದರು. ಜೆಸಿಬಿ ಸಹಾಯದಿಂದ ಮೃತದೇಹವನ್ನು ಹೊರತೆಗೆದು ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರ ವಶಕ್ಕೆ ನೀಡಲಾಯಿತು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ, ಡಿವೈಎಸ್‌ಪಿ ಲಕ್ಷ್ಮಯ್ಯ, ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ವನರಾಜು, ಪರಶಿವಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮೃತನ ತಾಯಿ ಲಕ್ಷ್ಮಮ್ಮ ನೀಡಿದ ದೂರಿನ ಆಧಾರದ ಮೇಲೆ ತೆರಕಣಾಂಬಿ ಠಾಣೆ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ.
ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕ್ವಾರಿ:
ಗಣಿಗಾರಿಕೆ ನಡೆಯುವ ಸ್ಥಳದ ಅಕ್ಕಪಕ್ಕದಲ್ಲಿ ಜಮೀನುಗಳಿದ್ದು ರೈತರು ಹಾಗೂ ಜಾನುವಾರುಗಳು ಓಡಾಡುತ್ತಿದ್ದಾರೆ. ನಿಯಮದ ಪ್ರಕಾರ ಗಣಿ ಪ್ರದೇಶದ ಸುತ್ತಲೂ ತಂತಿ ಬೇಲಿ ನಿರ್ಮಾಣ ಮಾಡಬೇಕಾಗಿದೆ. ಆದರೆ ಇಲ್ಲಿ ಬೇಲಿ ಹಾಕಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಇನ್ನೂ ಅನಾಹುತಗಳು ಸಂಭವಿಸುವ ಸಾಧ್ಯವಿದೆ ಎಂಬುದು ಸುತ್ತಮುತ್ತಲಿನ ಗ್ರಾಮದ ನಿವಾಸಿಗಳ ಆತಂಕವಾಗಿದೆ.