ಮಳೆ, ಗಾಳಿಗೆ ಸಾವಿರಾರು ಎರಕೆ ಬಾಳೆ ನಾಶ

16-GPT-1A
Published on

ಗುಂಡ್ಲುಪೇಟೆ: ಇತ್ತೀಚೆಗೆ ಬಿದ್ದ ಗಾಳಿ ಸಹಿತ ಮಳೆಗೆ ತಾಲೂಕಿನ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ನೆಲಕಚ್ಚಿದ್ದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.


ಕಳೆದ ವರ್ಷ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿದ ಪರಿಣಾಮ ಬಹುತೇಕ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದೆ. ಇದರಿಂದ ಬಹುತೇಕ ರೈತರು ವಾರ್ಷಿಕ ಬೆಳೆಯಾದ ಬಾಳೆಯನ್ನು ಬೆಳೆಯಲು ಮುಂದಾಗಿದ್ದು ತಾಲೂಕಿನಲ್ಲಿ 200 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶಗಳಲ್ಲಿ ಬೆಳೆಯಲಾಗಿದೆ. ಜೂನ್ ವೇಳೆಗೆ ಕಟಾವು ಮಾಡಿದರೆ ಉತ್ತಮ ಬೆಲೆ ಸಿಕ್ಕುತ್ತದೆ ಎಂಬ ಕಾರಣದಿಂದ ಬಹುತೇಕ ರೈತರು ಬಾಳೆಯನ್ನು ಬೆಳೆದಿದ್ದಾರೆ. ಆದರೆ ಮಳೆಯೊಂದಿಗೆ ಜೋರು ಗಾಳಿ ಬೀಸಿದ್ದರಿಂದ ಗೊನೆ ಬಿಟ್ಟು ಕಟಾವಿಗೆ ಬಂದಿದ್ದ ಬಾಳೆಕಟ್ಟೆಗಳು ನೆಲಕ್ಕುರುಳಿವೆ.


ಕಳೆದ ವರ್ಷ ಬಿದ್ದ ಅಧಿಕ ಮಳೆಯಿಂದ ಹುಲುಸಾಗಿ ಬೆಳೆದಿದ್ದ ಅರಿಶಿಣದ ಜಮೀನುಗಳಲ್ಲಿ ನೀರು ನಿಂತು ಬಹುತೇಕ ಬೆಳೆ ಕೊಳೆತು ಹೋಗಿತ್ತು. ಇದಕ್ಕೆ ಸರ್ಕಾರದಿಂದ ಸ್ವಲ್ಪಮಟ್ಟಿಗೆ ಪರಿಹಾರ ನೀಡಿದ್ದರೂ ಫಸಲು ನಾಶ ಹಾಗೂ ಬೆಳೆಗೆ ಸೂಕ್ತ ಬೆಲೆ ಸಿಗದೆ ತೀವ್ರ ನಷ್ಟ ಅನುಭವಿಸುವಂತಾಗಿತ್ತು. ಆದರೆ ಈ ಬಾರಿ ಪೂರ್ವ ಮುಂಗಾರು ಆರಂಭದಲ್ಲಿಯೇ ಭಾರಿ ಗಾಳಿ ಮಳೆಗೆ ತಾಲೂಕಿನಾದ್ಯಂತ ಕಟಾವಿಗೆ ಬಂದಿದ್ದ ಬಾಳೆ ನೆಲಕಚ್ಚಿರುವುದು ಮತ್ತಷ್ಟು ನಷ್ಟಕ್ಕೆ ಕಾರಣವಾಗುತ್ತಿದೆ. ಕಳೆದ ವರ್ಷವೂ ಬಾಳೆ ನಾಶವಾಗಿದ್ದ ಬಗ್ಗೆ ಅರ್ಜಿ ಸಲ್ಲಿಸಿದರೆ ಕೇವಲ ಎರಡೂವರೆ ಸಾವಿರ ಪರಿಹಾರ ಬಂದಿತ್ತು. ಆದರೂ ವರ್ಷವಾದರೂ ಬಹಳ ಜನರಿಗೆ ಇನ್ನೂ ಪರಿಹಾರವೂ ಬಂದಿಲ್ಲ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ ಸುಮಾರು 20 ಹೆಕ್ಟೇರ್ ಪ್ರದೇಶದಲ್ಲಿ ಗಾಳಿ ಮಳೆಗೆ ಬಾಳೆ ನೆಲಕ್ಕುರುಳಿವೆ. ಮಾರುಕಟ್ಟೆ ಬೆಲೆಯಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚಿನ ಬೆಲೆಬಾಳುತ್ತಿದ್ದ ಬಾಳೆ ನಾಶವಾಗಿದ್ದು, ಕಂದಾಯ ಇಲಾಖೆಯ ಜತೆ ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗಿದೆ. ಅರ್ಜಿ ಸಲ್ಲಿಸಿದ ರೈತರಿಗೆ ಕಂದಾಯ ಇಲಾಖೆಯು ನೈಸರ್ಗಿಕ ವಿಪತ್ತು ನಿಧಿಯಿಂದ ಪರಿಹಾರ ನೀಡಲಿದೆ.
ರಾಜು, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net