

ಗುಂಡ್ಲುಪೇಟೆ: ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮೂಲೆಹೊಳೆ ಮೈದುಂಬಿ ಹರಿಯುತ್ತಿದ್ದು, ವನ್ಯಜೀವಿಗಳ ದಾಹ ತಣಿಸುತ್ತಿದೆ.
ಈ ಬಾರಿ ಪೂರ್ವ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕೇರಳದಲ್ಲಿಯೂ ಸಾಕಷ್ಟು ಮಳೆ ಬೀಳದೆ ಬಂಡೀಪುರದ ಪ್ರಮುಖ ನೀರಿನ ತಾಣವಾದ ಮೂಲೆಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿತ್ತು. ದಿನೇ ದಿನೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದ ಪರಿಣಾಮ ಕಾಟಿ, ಆನೆ ಮುಂತಾದ ವನ್ಯಜೀವಿಗಳು ಕಬಿನಿಯ ಹಿನ್ನೀರಿನತ್ತ ತೆರಳಿದ್ದವು.
ಆದರೆ ಕೆಲವು ದಿನಗಳಿಂದ ಕೇರಳದಲ್ಲಿ ಮುಂಗಾರು ಮಳೆ ಜೋರಾಗಿದೆ. ಮೂಲೆಹೊಳೆಗೆ ಸೇರಿದಂತಿರುವ ವೈನಾಡಿನಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಇದರಿಂದ ಬೇಸಿಗೆಯಲ್ಲಿ ಬತ್ತಿ ಹೋಗಿದ್ದ ಮೂಲೆಹೊಳೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಹೊಳೆಯ ನಡುವೆ ಎದ್ದು ಕಾಣುತ್ತಿದ್ದ ಬಂಡೆಗಳ ಮೇಲೆ ನೀರು ದೊಡ್ಡ ಪ್ರಮಾಣದಲ್ಲಿ ಹರಿದು ನುಗು ಜಲಾಶಯ ಸೇರುತ್ತಿದೆ. ಕಲ್ಕೆರೆ ವಲಯದ ರಾಂಪುರ ಸಾಕಾನೆ ಶಿಬಿರದ ಆನೆಗಳಿಗೂ ನೀರಿನ ಕೊರತೆ ನೀಗಿದೆ.
ಕಳೆದ ವಾರದಿಂದ ಮೂಲೆಹೊಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ವನ್ಯಜೀವಿಗಳಿಗೆ ಈ ಬಾರಿ ನೀರಿನ ಕೊರತೆಯಾಗದಂತೆ ಮಾಡಿದೆ ಎಂದು ಮೂಲೆಹೊಳೆ ವಲಯದ ಆರ್.ಎಫ್.ಒ. ನರೇಶ್ ತಿಳಿಸಿದ್ದಾರೆ.