ಶೋಷಿತ ಸಮಾಜವನ್ನು ಒಗ್ಗೂಡಿಸಿದ ಸಿದ್ದು

27-GPT-2
ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮವನ್ನು ಎಚ್.ಎಂ.ರೇವಣ್ಣ ಉದ್ಘಾಟಿಸಿದರು. ಬೈರತಿ ಸುರೇಶ್, ಶಿವಾನಂದಪುರಿ ಸ್ವಾಮೀಜಿ, ಗಣೇಶ್ ಪ್ರಸಾದ್, ಡಾ.ಯತೀಂದ್ರ, ನಂಜುಂಡಪ್ರಸಾದ್ ಇದ್ದರು.
Published on

ಗುಂಡ್ಲುಪೇಟೆ: ರಾಜ್ಯದಲ್ಲಿ ಶೋಷಿತ ಸಮಾಜವನ್ನು ಒಗ್ಗೂಡಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಹಿಂದ ಸಂಘಟನೆಯನ್ನು ಬಲಿಷ್ಠಗೊಳಿಸಿದ ಪರಿಣಾಮ ಹಿಂದುಳಿದ ವರ್ಗಗಳು ಒಗ್ಗೂಡುವಂತಾಗಿದ್ದು, ಕನಕ ಜಯಂತಿ ಆಚರಿಸುವಂತಾಗಿದೆ. ಅನ್ನಭಾಗ್ಯ ಯೋಜನೆಯ ಮೂಲಕ ಬಡವರ ಹಸಿವು ನೀಗಿಸುವ ಜತೆಗೆ ಬಡವರಿಗೆ ಅನುಕೂಲವಾಗುವ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ತಾವು ನೀಡಿದ್ದ ಭರವಸೆಗಳನ್ನು ಈಡೇರಿಸುವ ಜತೆಗೆ ಎಲ್ಲ ವರ್ಗದ ಬಡವರ ಬಗ್ಗೆ ಕಾಳಜಿವಹಿಸಿದ್ದಾರೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಜಾರಿಗೊಳಿಸಿ ರಾಜ್ಯದ ಜನತೆಗೆ ಸಲ್ಲಬೇಕಾದ ಸವಲತ್ತುಗಳನ್ನು ತಲುಪಿಸಲಾಗುವುದು. 262 ಕೋಟಿ ರೂ. ವೆಚ್ಚದಲ್ಲಿ ಭಾರತದಲ್ಲಿಯೇ ಅತ್ಯುತ್ತಮ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯನ್ನು ಆರಂಭಿಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ದೇವರ ಹೆಸರು ಮುನ್ನೆಲೆಗೆ ತರುವ ಮೂಲಕ ಬಿಜೆಪಿಯವರು ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಕಂದಕವುಂಟುಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮಾಜಿ ಶಾಸಕ ಡಾ.ಯತೀಂದ್ರ ಮಾತನಾಡಿ, ಸಮಾಜದಲ್ಲಿ ಶೋಷಿತ ಸಮುದಾಯಗಳ ಸಂಘಟನೆ ಮೂಲಕ ಹಿಂದುಳಿದವರ ಸ್ವಾಭಿಮಾನ ಜಾಗೃತಗೊಳಿಸಲಾಗುತ್ತಿದೆ. ಸಂಘಟನೆ ಮೂಲಕ ಶೋಷಿತರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದುವಂತಾಗಿದೆ. ಹಿಂದುಳಿದ ವರ್ಗದ ಮುಖಂಡರಿಗೆ ರಾಜಕೀಯ ಶಕ್ತಿ ದೊರಕಿದಾಗ ಮಾತ್ರ ತಮ್ಮ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಅಪೂರ್ಣ ರಾಮಮಂದಿರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ದೇವಸ್ಥಾನ ಕಟ್ಟುವುದು ಒಂದು ಭಾಗ. ಆದರೆ ರಾಮ ಮಂದಿರ ಕಟ್ಟಿದಾಕ್ಷಣ ರಾಮರಾಜ್ಯ ಸೃಷ್ಟಿಯಾಗುವುದಿಲ್ಲ. ಬಡವರು, ದೀನದಲಿತರಿಗೆ ನ್ಯಾಯ ಸಿಕ್ಕಾಗ, ಮಹಿಳೆಯರು ಮಧ್ಯರಾತ್ರಿಯಲ್ಲಿ ನಿರ್ಭಯವಾಗಿ ಸಂಚರಿಸುವಂತಾದಾಗ ಮಾತ್ರ ರಾಮರಾಜ್ಯವಾಗುತ್ತದೆ ಎಂದು ಹೇಳಿದರು.

ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಬೇಕಾಗಿದೆ. ಬಸವಣ್ಣನವರು ಸಮಾಜದಲ್ಲಿ ಎಲ್ಲರೂ ಸಮಾನರು ಎಂದು 12ನೇ ಶತಮಾನದಲ್ಲಿಯೇ ಹೇಳಿದ್ದರು. ಅಂತೆಯೇ ಕನಕದಾಸರು ಸಮಾನತೆ ಬಗ್ಗೆ ಪ್ರತಿಪಾದಿಸಿದ್ದರು. ಎಲ್ಲರೂ ಇವರ ವಚನಗಳನ್ನು ಪಾಲಿಸುವಂತಾಗಬೇಕು. ಪಟ್ಟಣದಲ್ಲಿ ಕನಕ ಭವನ ನಿರ್ಮಾಣ ಕಾಮಗಾರಿಗೆ ಅಗತ್ಯ ಅನುದಾನ ನೀಡಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಕನಕಗುರು ಪೀಠದ ಶಿವಾನಂದಪುರಿ ಸ್ವಾಮೀಜಿ, ಮಾಜಿ ಸಚಿವರಾದ ಎಚ್.ವಿಶ್ವನಾಥ್, ಎಚ್.ಎಂ.ರೇವಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ನಂಜುಂಡಪ್ರಸಾದ್, ಬಿ.ಎಂ.ಮುನಿರಾಜು, ಎಚ್.ಎನ್.ಬಸವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net