

ಗುಂಡ್ಲುಪೇಟೆ: ಗುಂಡ್ಲು ನದಿ ಪುನಶ್ಚೇತನದ ಅಂಗವಾಗಿ ಗುಂಡ್ಲು ಪರಿಸರ ಬಳಗದ ವತಿಯಿಂದ ನಾಲ್ಕನೇ ದಿನ ಶ್ರಮದಾನ ಯಶಸ್ವಿಯಾಗಿ ನಡೆಯಿತು.
ಬೆಳಗ್ಗೆ 6 ಗಂಟೆಯಿಂದಲೇ ಆರಂಭವಾದ ಶ್ರಮದಾನದಲ್ಲಿ ಹತ್ತಾರು ಸ್ವಯಂ ಸೇವಕರ ಸಹಕಾರದಿಂದ ಕೆರೆಯ ಏರಿಯ ಮೇಲೆ ಬೆಳೆದಿದ್ದ ಗಿಡಗಂಟೆಗಳನ್ನು ತೆರವು ಮಾಡಲಾಯಿತು. ದಾನಿಗಳು ಕಳಿಸಿದ ಜೆಸಿಬಿ ನೆರವಿನಿಂದ ಕೋಡಿಯನ್ನು ಆವರಿಸಿದ ಪೊದೆಗಳನ್ನು ತೆರವುಗೊಳಿಸಿ ಕಾಲುವೆಯಲ್ಲಿ ತುಂಬಿಕೊಂಡಿದ್ದ ಹೂಳೆತ್ತಲಾಯಿತು.
ಗುಂಡ್ಲು ಪುನಶ್ಚೇತನ ಸಮಿತಿಯ ಮುಖಂಡ ಶಂಕರನಾರಾಯಣ ಜೋಯಿಸ್ 5 ಸಾವಿರ ರೂ. ವಂತಿಗೆ ನೀಡುವ ಮೂಲಕ ಅಭಿಯಾನಕ್ಕೆ ಶುಭ ಹಾರೈಸಿದರು. ಶ್ರಮದಾನದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ವಿ.ನಾ.ಚಿದಾನಂದಸ್ವಾಮಿ, ಗುಂಡ್ಲು ಪರಿಸರ ಬಳಗದ ನಾಗಾರ್ಜುನ ಕುಮಾರ್, ಗಿರೀಶ್, ಪ್ರಣವ್, ಸಚಿನ್ ಇತರರು ಇದ್ದರು.