ಒಳ್ಳೆ ಕಾರ್ಯಕ್ಕೂ ಮುನ್ನ ಮೂಲಸ್ಥಾನೇಶ್ವರನಿಗೆ ಪೂಜೆ

08-GPT-1
Published on

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಮೂಲಸ್ಥಾನೇಶ್ವರ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಇರುವ ಅಪೂರ್ವ ದೇಗುಲ. ದೇವಾಲಯದಲ್ಲಿ ಸಿಕ್ಕಿರುವ ಶಿಲಾ ಶಾಸನದ ಪ್ರಕಾರ ಇದನ್ನು ಉಮ್ಮತ್ತೂರಿನ ಪಾಳೆಗಾರ ನಂಜರಾಜ ಕ್ರಿ.ಶ.1436ರಲ್ಲಿ ನಿರ್ಮಾಣ ಮಾಡಿದರು ಎನ್ನಲಾಗುತ್ತದೆ.

ದೇವಾಲಯದಲ್ಲಿ ಪೂಜೆ, ಪುರಸ್ಕಾರ ನೆರವೇರಲು ಪಾಳೆಗಾರರು ಜಮೀನುಗಳನ್ನು ದತ್ತಿ ನೀಡಿದ್ದರು. ಹಿಂದೆ ಭಾರಿ ಪ್ರವಾಹಕ್ಕೆ ಸಿಲುಕಿ ಮುಚ್ಚಿಹೋಗಿದ್ದ ದೇವಾಲಯವು ಜಮೀನನ್ನು ಉಳುಮೆ ಮಾಡುವ ಸಮಯದಲ್ಲಿ ನೇಗಿಲ ಮೊನೆಗೆ ಸಿಕ್ಕಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ. ರೈತರು ಕುತೂಹಲದಿಂದ ಭೂಮಿಯನ್ನು ಅಗೆದಾಗ ದೇವಾಲಯದ ಮೇಲ್ಭಾಗದ ಕಲ್ಲುಗಳು ಕಂಡುಬಂದವು. ನಂತರ ಗ್ರಾಮಸ್ಥರು ಸೇರಿ ಮಣ್ಣು ಸರಿಸಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದರು ಎಂದು ಹೇಳಲಾಗುತ್ತದೆ.

ದೇವಸ್ಥಾನದ ಪಕ್ಕದ ಜಮೀನಿನ ಮಾಲೀಕರಾದ ಟಿ.ಎನ್.ಸಂಪತ್ತು ಮತ್ತು ನಾಗರಾಜು ಅವರು ನೆರವು ನೀಡಿದ ಹಿನ್ನೆಲೆಯಲ್ಲಿ ಪೂಜೆ, ಪುರಸ್ಕಾರಗಳು ನಡೆದುಕೊಂಡು ಬರುತ್ತಿತ್ತು. ಭೂಮಿಯ ಒಳಗೆ ಹೂತುಕೊಂಡಿದ್ದ ಪುರಾತನ ದೇವಾಲಯವನ್ನು ಸಂರಕ್ಷಿಸುವ ಉದ್ದೇಶದಿಂದ ಗ್ರಾಮಸ್ಥರು ಸೇರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ನೆರವಿನಿಂದ ಜೀರ್ಣೋದ್ಧಾರ ಮಾಡಿ 2021ರಲ್ಲಿ ಲೋಕಾರ್ಪಣೆ ಮಾಡಲಾಗಿದೆ.

ಅಪರೂಪದ ಮೂರ್ತಿಗಳು: ದೇವಾಲಯದ ಪ್ರದೇಶದ ಎಡ, ಬಲದಲ್ಲಿ ಗಣಪ ಹಾಗೂ ಸುಬ್ರಹ್ಮಣ್ಯ ಸ್ವಾಮೀಯ ಬೃಹತ್ ಮೂರ್ತಿಗಳಿವೆ. ಪೂರ್ವ ಭಾಗದ ಪ್ರಾಕಾರದ ಒಳಭಾಗಕ್ಕೆ ಸೇರಿದಂತೆ ವೀರಭದ್ರ ಹಾಗೂ ದುರ್ಗೆ ಗುಡಿಯಿದೆ. ಹೊರಗೆ ದಕ್ಷಿಣ ದಿಕ್ಕಿನಲ್ಲಿ ಅಪರೂಪದ ದಕ್ಷಿಣಾಮೂರ್ತಿ, ಪೂರ್ವದಲ್ಲಿ ಕಾಲಭೈರವೆಶ್ವರ ಹಾಗೂ ಪಶ್ಚಿಮದಲ್ಲಿ ಚಂಡಿಕೇಶ್ವರ ಮೂರ್ತಿಗಳಿವೆ. ಗರ್ಭಗೃಹ, ಸುಖನಾಸಿ, ವಿಶಾಲವಾದ ನವರಂಗ, ಇದಕ್ಕೆ ಸೇರಿದಂತೆ ದೊಡ್ಡದಾದ ಮುಖಮಂಟಪಗಳಿವೆ.
ಉಮ್ಮತ್ತೂರಿನ ಪಾಳೇಗಾರ ನಂಜರಾಜ ಈ ದೇವಸ್ಥಾನಕ್ಕೆ ಅಂಗಭೋಗ, ರಂಗಭೋಗ, ರಥೋತ್ಸವ ಮುಂತಾದ ಸೇವೆಗಳನ್ನು ನೆರವೇರಿಸಲು ದೇವದಾಯ, ಬ್ರಹ್ಮದಾಯದ ಗ್ರಾಮಗಳು (ಭಂಡಾರದಿಂದ), ಪಿರಿಯೂರು ಪುರಗಳು ಮೊದಲಾದ ಗ್ರಾಮಗಳನ್ನು ಧರ್ಮವಾಗಿ ನೀಡಿದ ವಿಚಾರವನ್ನು ಕ್ರಿ.ಶ.1436ರ ಶಾಸನ ಪ್ರಸ್ತಾಪಿಸುತ್ತದೆ. ಪ್ರಸ್ತುತ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಲಾಗಿದ್ದು, ನಿತ್ಯ ಪೂಜೆ ನಡೆಯುತ್ತಿದೆ.

ಪೂಜೆ ಪುರಸ್ಕಾರಗಳು: ಗ್ರಾಮಸ್ಥರ ಆರಾಧ್ಯ ದೈವವಾದ ಮೂಲಸ್ಥಾನೇಶ್ವರನಿಗೆ ಪ್ರತಿ ದಿನವೂ ಪೂಜೆ ಸಲ್ಲಿಸಲಾಗುತ್ತಿದೆ. ಪ್ರತಿದಿನವೂ ಹಾಲು, ಮೊಸರು ಜೇನು ತುಪ್ಪದಿಂದ ಅಭಿಷೇಕ ಮಾಡಿ ನೈವೇದ್ಯ ಮಾಡಲಾಗುತ್ತಿದೆ. ಪ್ರತಿ ತ್ರಯೋದಶಿಯಂದು ಬೆಳಗ್ಗೆ ಮತ್ತು ಸಂಜೆ ಪೂಜೆ, ಸೋಮವಾರ, ಕಾರ್ತಿಕ ಮಾಸ, ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ವಿಶೇಷ ಪೂಜೆ ಸಲ್ಲಿಸಲಾಗುವುದು. ಶನಿವಾರ ಪ್ರದೋಷ ಬಂದರೆ ಬೆಳಗ್ಗೆ ಮತ್ತು ಸಂಜೆ ಎರಡೂ ಸಮಯದಲ್ಲಿ ಪೂಜೆ ಸಲ್ಲಿಸಿ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡಿಸಲಾಗುತ್ತದೆ. ಪ್ರತಿ ಗುರುವಾರ ದಕ್ಷಿಣಾಮೂರ್ತಿಗೆ, ಪ್ರತಿ ತಿಂಗಳ ಷಷ್ಠಿಯಂದು ಗಣೇಶ, ಈಶ್ವರ ಹಾಗೂ ಸುಬ್ರಹ್ಮಣ್ಯರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಮೊದಲ ಪೂಜೆ ದಕ್ಷಿಣಾಮೂರ್ತಿಗೆ: ದೇವಾಲಯಕ್ಕೆ ಬರುವ ಎಲ್ಲ ಭಕ್ತರೂ ದಕ್ಷಿಣದ ಪ್ರವೇಶದಲ್ಲಿರುವ ದಕ್ಷಿಣಾಮೂರ್ತಿಯ ದರ್ಶನ ಪಡೆದು, ಪ್ರಾರ್ಥನೆ ಹಾಗೂ ಪೂಜೆ ಮಾಡಿದ ನಂತರ ದೇವಾಲಯ ಪ್ರದಕ್ಷಿಣೆ ಹಾಕಿದ ನಂತರ ಒಳಗೆ ಪ್ರವೇಶಿಸುವುದು ವಾಡಿಕೆ.

ತಲುಪುವುದು ಹೇಗೆ?
ತಾಲೂಕು ಕೇಂದ್ರದಿಂದ 12 ಕಿ.ಮೀ. ಜಿಲ್ಲಾ ಕೇಂದ್ರದಿಂದ 22 ಕಿ.ಮೀ. ಅಂತರದಲ್ಲಿದೆ ಈ ದೇವಸ್ಥಾನವಿದೆ. ಗ್ರಾಮದಿಂದ ಪಟ್ಟಣಕ್ಕೆ ಹೋಗುವ ಮುಖ್ಯರಸ್ತೆಯಿಂದ 100 ಮೀಟರ್ ದೂರದ ತಗ್ಗು ಪ್ರದೇಶದಲ್ಲಿ ಸಾಗಿದರೆ ದೇವಸ್ಥಾನ ಸಿಗುತ್ತದೆ.

ಗ್ರಾಮಸ್ಥರು ಯಾವುದೇ ಕೆಲಸ ಆರಂಭಿಸುವ ಮೊದಲು ಇಲ್ಲಿಗೆ ಬಂದು ಗುರುಸ್ಥಾನದಲ್ಲಿರುವ ದಕ್ಷಿಣಾಮೂರ್ತಿಗೆ, ಮಕ್ಕಳ ಬಾಲಗ್ರಹದೋಷ ಪರಿಹಾರಕ್ಕೆ ಚಂಡಿಕೇಶ್ವರರಿಗೆ ಪೂಜೆ ಸಲ್ಲಿಸುವುದು ವಾಡಿಕೆ. ತಮ್ಮ ಹರಕೆ ಈಡೇರಿದ ಭಕ್ತರು ವೀರಭದ್ರ ಮತ್ತು ಕಾಲಭೈರವರಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಅರಸರ ಕಾಲದ ದೇವಾಲಯವನ್ನು ಗ್ರಾಮಸ್ಥರು ಕಾಲಕಾಲಕ್ಕೆ ಜೀರ್ಣೋದ್ಧಾರ ಮಾಡಿದ್ದು, ಇತ್ತೀಚಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸವಗ್ರವಾಗಿ ಅಭಿವೃದ್ಧಿಗೊಳಿಸಲಾಗಿದೆ.
ಸತೀಶ್, ಪ್ರಧಾನ ಅರ್ಚಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net