ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ

05-GPT-4
Published on

ಗುಂಡ್ಲುಪೇಟೆ: ತಾಲೂಕಿನ ಗ್ರಾಮಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.


ಚನ್ನಂಜಯ್ಯನಹುಂಡಿ ಗ್ರಾಮದಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ತಳಲೆ ಮತ್ತು ಕುರಿಕಟ್ಟೆ ಸೇತುವೆ, ಸಾಮಾನ್ಯ ವರ್ಗದ ಬೀದಿಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಹಾಗೂ ಬಸವ ಭವನ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.


ಯಾವುದೇ ಗ್ರಾಮಗಳಿಗೆ ಅಗತ್ಯವಾದ ಕೆಲಸಗಳನ್ನು ಗುರುತಿಸಿ ಆದ್ಯತೆ ನೀಡಲಾಗುತ್ತಿದೆ. ಸದ್ಯ ಚನ್ನಂಜಯ್ಯನಹುಂಡಿ ಗ್ರಾಮದ ಅಭಿವೃದ್ಧಿಗೆ 1 ಕೋಟಿ 60 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಈ ಹಿಂದೆ ಪರಿಶಿಷ್ಟರ ಬೀದಿಗಳನ್ನು ಹೊರತುಪಡಿಸಿ ಸಾಮಾನ್ಯ ವರ್ಗದವರು ವಾಸಿಸುವ ಬೀದಿಗಳಿಗೆ ರಸ್ತೆ ಮತ್ತು ಚರಂಡಿ ನಿರ್ಮಾಣ ಮರೀಚಿಕೆಯಾಗಿತ್ತು. ಹಿಂದುಳಿದ ಸಮುದಾಯದವರ ಚಟುವಟಿಕೆಗಳಿಗೆ ನೆರವಾಗಲು ಸಮುದಾಯ ಭವನ ನಿರ್ಮಿಸಲಾಗುತ್ತಿತ್ತು. ಆದರೆ ನಾನು ಶಾಸಕನಾಗಿ ಆಯ್ಕೆಯಾದ ನಂತರ ಬಹುತೇಕ ಗ್ರಾಮಗಳಲ್ಲಿ ಸಾಮಾನ್ಯ ವರ್ಗದ ಬೀದಿಗೂ ಸಿಸಿ ರಸ್ತೆ ಹಾಗೂ ಬಸವ ಭವನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಿರುವುದಾಗಿ ಹೇಳಿದರು.


ಬನ್ನಿತಾಳಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾಯಮ್ಮಣ್ಣಿ, ಮಾಜಿ ಸದಸ್ಯ ರಾಜಪ್ಪ, ಬಿಜೆಪಿ ಮಂಡಲಾಧ್ಯಕ್ಷ ದೊಡ್ಡಹುಂಡಿ ಜಗದೀಶ್, ತಾಪಂ ಮಾಜಿ ಸದಸ್ಯ ಸಿ,ಮಹದೇವಪ್ರಸಾದ್, ಕಲ್ಲಹಳ್ಳಿ ಮಹೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net