ವನ್ಯಜೀವಿಗಳ ಪಾಲಾಗುತ್ತಿರುವ ಬೆಳೆಗಳು

08-GPT-2A-
Published on

ಗುಂಡ್ಲುಪೇಟೆ: ಕಾಡಂಚಿನಲ್ಲಿರುವ ಜಮೀನುಗಳಿಗೆ ಸೋಲಾರ್ ಬೇಲಿ ಹಾಕಲು ರೈತರಿಗೆ ಅರಣ್ಯ ಇಲಾಖೆ ಬಂಡೀಪುರ ಹುಲಿ ಯೋಜನೆಯಡಿ ನೀಡುತ್ತಿರುವ ಸಹಾಯಧನ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಳು ವನ್ಯಜೀವಿಗಳ ಪಾಲಾಗುತ್ತಿವೆ.


ಜಿಂಕೆಗಳು ಹಾಗೂ ಕಾಡುಹಂದಿಗಳಿಂದಾದ ಬೆಳೆನಷ್ಟಕ್ಕೆ ಅರಣ್ಯ ಇಲಾಖೆಯಿಂದ ಯಾವುದೇ ಪರಿಹಾರ ಸಿಗದ ಪರಿಣಾಮ ರೈತರು ಹೈರಾಣಾಗುತ್ತಿದ್ದಾರೆ. ತಾಲೂಕಿನ ಮೂರು ದಿಕ್ಕುಗಳಲ್ಲಿಯೂ ಆವರಿಸಿರುವ ಬಂಡೀಪುರ ಅರಣ್ಯದಲ್ಲಿ ಕಂದಕ ಹಾಗೂ ಸೋಲಾರ್ ಬೇಲಿ ನಿರ್ಮಿಸಿದ್ದರೂ ಮಳೆಗಾಲದಲ್ಲಿ ಕಂದಕಕ್ಕೆ ಮಣ್ಣು ತುಂಬಿಕೊಳ್ಳುತ್ತದೆ. ಸೋಲಾರ್ ಬೇಲಿ ಅಳವಡಿಸಿದ್ದರೂ ಸರಿಯಾಗಿ ನಿರ್ವಹಣೆ ಮಾಡದ ಕಾರಣ ದುರ್ಬಲವಾಗಿರುವ ಪ್ರದೇಶದಿಂದ ವನ್ಯಜೀವಿಗಳು ಹೊರಬರುತ್ತಿವೆ. ಇದನ್ನು ತಡೆಗಟ್ಟಲು ಅರಣ್ಯ ಇಲಾಖೆ ರೈತರ ಜಮೀನುಗಳಲ್ಲಿ ಸೋಲಾರ್ ಬೇಲಿ ನಿರ್ಮಿಸಲು ವೆಚ್ಚವಾಗುವ ಹಣದಲ್ಲಿ ಶೇ.50 ಅನುದಾನವನ್ನು ಮಾತ್ರ ನೀಡಲಾಗುತ್ತಿದೆ. ಈ ಯೋಜನೆ ಮೂಲಕ ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಕ್ರಮಕೈಗೊಂಡಿದೆ.


ಕಾಡಂಚಿನ 5 ಕಿಲೋಮೀಟರ್ ವ್ಯಾಪ್ತಿಯ ಜಮೀನುಗಳ ಅರ್ಜಿಗಳಿಗೆ ಮೊದಲ ಹಂತದಲ್ಲಿ ನಂತರ ಉಳಿದ ಅರ್ಜಿಗಳಿಗೆ ಆದ್ಯತೆ ಮೇರೆಗೆ ಅನುದಾನ ನೀಡಲಾಗುತ್ತಿತ್ತು. ಈ ನಡುವೆ ಕಾಡುಹಂದಿಗಳು ಅರಣ್ಯ ಪ್ರದೇಶಕ್ಕಿಂತ ನಾಡಿನಲ್ಲಿಯೇ ಹೆಚ್ಚಾಗಿ ನೆಲೆಸಿರುವುದರಿಂದ ಬಫರ್ ವಲಯದ ಅಂಚಿನ ಜಮೀನುಗಳಿಗೂ ಅನುದಾನ ನೀಡಲಾಗುತ್ತಿತ್ತು. ಇದಕ್ಕೆ ಅಗತ್ಯವಾದ ಅನುದಾನವನ್ನು ಬಂಡೀಪುರ ಟೈಗರ್ ಕನ್ಸರ್ವೇಶನ್ ಫಂಡ್(ಬಿಟಿಸಿಎಫ್) ನಿಂದ ಪ್ರತಿ ವರ್ಷವೂ ತನ್ನ ಬಜೆಟ್‌ನಲ್ಲಿ 10 ರಿಂದ 20 ಲಕ್ಷ ರೂ.ವರೆಗೂ ಮೀಸಲಿಟ್ಟು ಬಿಡುಗಡೆ ಮಾಡುತ್ತಿತ್ತು.


ಆದರೆ, ಈ ಬಾರಿ ಸರ್ಕಾರದಿಂದ ಸಕಾಲದಲ್ಲಿ ಅನುದಾನ ಬಿಡುಗಡೆಯಾಗದ ಪರಿಣಾಮ ಅರಣ್ಯ ಇಲಾಖೆ ನೌಕರರಿಗೆ ಸಂಬಳ ನೀಡಲು ಇದೇ ಬಿಟಿಸಿಎಫ್ ಅನುದಾನವನ್ನೇ ಅವಲಂಬಿಸಬೇಕಾಗಿದೆ. ಅನುದಾನದ ಕೊರತೆಯುಂಟಾಗಿದ್ದರಿಂದ ಈ ವರ್ಷ ರೈತರಿಗೆ ಸೋಲಾರ್ ಬೇಲಿ ನಿರ್ಮಾಣಕ್ಕೆ ಸಹಾಯಧನ ನೀಡಲು ವಿಳಂಬವಾಗುತ್ತಿದ್ದು, ರೈತರ ಬೆಳೆಗಳು ವನ್ಯಜೀವಿಗಳ ಪಾಲಾಗುತ್ತಿವೆ. ಆನೆಗಳ ದಾಳಿಯಿಂದಾದ ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆ ಪರಿಹಾರ ನೀಡುತ್ತಿದೆ. ಆದರೆ ಜಿಂಕೆಗಳು ಹಾಗೂ ಕಾಡುಹಂದಿಗಳಿಂದಾದ ಬೆಳೆನಷ್ಟಕ್ಕೆ ಯಾವುದೇ ಪರಿಹಾರ ಕೊಡುತ್ತಿಲ್ಲ.

ಹಿಂಡು ಹಿಂಡಾಗಿ ದಾಳಿ ಮಾಡುವ ಕಾಡುಹಂದಿಗಳು ರೈತರ ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತಿವೆ. ಸರ್ಕಾರ ಕಾಡುಹಂದಿಗಳನ್ನು ಗುಂಡಿಕ್ಕುವ ಮೂಲಕ ನಿಯಂತ್ರಿಸಲು ಅನುಮತಿ ನೀಡಿದ್ದರೂ ಅರಣ್ಯ ಇಲಾಖೆ ಈವರೆಗೆ ಇದನ್ನು ಅನುಸರಿಸುತ್ತಿಲ್ಲ. ಇದರಿಂದ ರೈತರ ಬೆಳೆ ಹಾಗೂ ಜೀವ ಆಪತ್ತಿನಲ್ಲಿ ಸಿಲುಕುವಂತಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಇನ್ನಾದರೂ ಒಂದೋ ಹೆಚ್ಚಾಗುತ್ತಿರುವ ಕಾಡುಹಂದಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ, ಇಲ್ಲವೇ ಬೆಳೆ ನಷ್ಟಕ್ಕೆ ಪರಿಹಾರ ಕೊಡಬೇಕು.
ಕಡಬೂರು ಮಂಜುನಾಥ್, ರೈತ ಮುಖಂಡ

ಬಿಟಿಸಿಎಫ್‌ನಲ್ಲಿ ಅನುದಾನದ ಕೊರತೆಯಾಗಿದ್ದರಿಂದ ಸೋಲಾರ್ ಬೇಲಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ವಿಳಂಬವಾಗಿತ್ತು. ನಿಯಮಾನುಸಾರ ಸಲ್ಲಿಸಿದ ಅರ್ಜಿಗಳಿಗೆ ಹಿರಿತನದ ಆಧಾರದ ಮೇಲೆ ಅನುದಾನ ಬಿಡುಗಡೆ ಮಾಡಲಾಗುವುದು.
ಡಾ.ರಮೇಶ್‌ಕುಮಾರ್ ನಿರ್ದೇಶಕರು, ಬಂಡೀಪುರ ಹುಲಿ ಯೋಜನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net