ಗೋಪಾಲಸ್ವಾಮಿ ಬೆಟ್ಟಕ್ಕೆ ಕಾರಿನಲ್ಲಿ ಬಂದ ಶಾಸಕ

17-GPT-3
Published on

ಗುಂಡ್ಲುಪೇಟೆ: ಖಾಸಗಿ ವಾಹನಗಳ ಪ್ರವೇಶಕ್ಕೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದ್ದರೂ ಮಂಡ್ಯದ ಶಾಸಕ ರವಿಕುಮಾರ್ ಗಣಿಗ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸ್ವಂತ ಕಾರಿನಲ್ಲಿ ಹೋಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಎರಡು ದಿನಗಳಿಂದ ಬಂಡೀಪುರ ಸುತ್ತಲಿನ ಪ್ರದೇಶಗಳಲ್ಲಿ ಪ್ರವಾಸದಲ್ಲಿದ್ದ ರವಿಕುಮಾರ್ ಗಣಿಗ ತಮ್ಮ ಕಾರಿನಲ್ಲಿ ಸೋಮವಾರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಹೋದಾಗ ತಪ್ಪಲಿನ ಚೆಕ್‌ಪೋಸ್ಟ್‌ನಲ್ಲಿದ್ದ ಅರಣ್ಯ ಸಿಬ್ಬಂದಿ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ ಎಂದು ಪ್ರವೇಶದಲ್ಲಿಯೇ ತಡೆದಿದ್ದಾರೆ. ಶಾಸಕನಾದ ನನ್ನ ಕಾರಿಗೆ ವಿಧಾನಸಭಾ ಅಧ್ಯಕ್ಷರು ನೀಡಿರುವ ಪಾಸ್ ಇದೆ, ಎಲ್ಲಿಗೆ ಬೇಕಾದರೂ ಹೋಗಬಹುದು ಎಂದು ರವಿಕುಮಾರ್ ವಾದಿಸಿದರು.

ಈ ಸಂದರ್ಭದಲ್ಲಿ ಅವರೊಂದಿಗಿದ್ದ ಕಾಂಗ್ರೆಸ್ ಮುಖಂಡರು, ‘ಹಿಂದೆ ಇದ್ದ ಶಾಸಕರ ಕಾರನ್ನು ನೇರವಾಗಿ ಬೆಟ್ಟಕ್ಕೆ ಬಿಡಲಾಗುತ್ತಿತ್ತು. ಆದ್ದರಿಂದ ಪಾಸ್ ಹೊಂದಿರುವ ಈ ಕಾರನ್ನು ಸಹ ಬಿಡಬೇಕು’ ಎಂದು ಪಟ್ಟುಹಿಡಿದು ಗದ್ದಲ ಎಬ್ಬಿಸಿ ಕಾರಿನಲ್ಲಿಯೇ ತೆರಳಿದರು. ಬೆಟ್ಟಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರಿಂದ ಹಾಗೂ ವಿರಳ ಸಂಖ್ಯೆಯಲ್ಲಿದ್ದ ಸಿಬ್ಬಂದಿ ಅಸಹಾಯಕರಾಗಿದ್ದರು. ಈ ಬಗ್ಗೆ ಸ್ಥಳದಲ್ಲಿದ್ದ ಸಾರ್ವಜನಿಕರು ಅರಣ್ಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ದೊಡ್ಡವರಿಗೊಂದು ಹಾಗೂ ಸಾಮಾನ್ಯ ಜನರಿಗೊಂದು ನಿಯಮ ಅನುಸರಿಸುತ್ತಿದೆ. ಅರಣ್ಯ ಇಲಾಖೆ ನಿಯಮಗಳನ್ನು ಉಲ್ಲಂಘಿಸಿದ ಶಾಸಕರ ವಿರುದ್ಧ ಕೂಡಲೇ ಕೇಸ್ ದಾಖಲಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದು, ಕಾರಿನ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ವಾಹನಗಳಿಗೆ ಬಿಟ್ಟು ಬೇರೆ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿದೆ ಎಂದು ಸಿಬ್ಬಂದಿ ತಿಳಿಸಿದರೂ ಕೇಳದೆ ಸ್ವಂತ ಕಾರಿನಲ್ಲಿ ಹೋಗಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.ಮಂಜುನಾಥ್ ವಲಯಾರಣ್ಯಾಧಿಕಾರಿ ಗೋಪಾಲಸ್ವಾಮಿ ಬೆಟ್ಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net