

ಗುರುಗುಂಟಾ: ಗ್ರಾಮದಿಂದ ಒಂದು ಮೈಲು ದೂರದಲ್ಲಿರುವ ಗೊಲಪಲ್ಲಿಯ ಗುಂಡಲಬಂಡ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ದಟ್ಟ ಅರಣ್ಯದ ಹಚ್ಚಹಸಿರಿನ ಕಾನನ ಮಧ್ಯೆ ದೊಡ್ಡ ಬಂಡೆಗಳ ಮೇಲೆ ಹಾಲ್ನೊರೆಯಂತೆ ಹರಿಯುವ ಜಲಪಾತದ ರಮಣೀಯ ವೈಭವದ ಕಣ್ತುಂಬಿಕೊಳ್ಳಲು ನಿತ್ಯ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ನಾರಾಯಣಪುರ ಜಲಾಶಯದಿಂದ ಬಲದಂಡೆ ನಾಲೆಗಳಿಗೆ ಹರಿದು ಹೆಚ್ಚಾದ ನೀರು ಮತ್ತು ಮಳೆಯ ನೀರು ಗುಂಡಲಬಂಡ ಗುಡ್ಡದಿಂದ ಹರಿಯುತ್ತದೆ.
90 ಅಡಿಗೂ ಹೆಚ್ಚಿನ ಎತ್ತರದ ಮೇಲಿಂದ ಇಳಿಜಾರುವಿನಲ್ಲಿ ಧುಮ್ಮಿಕ್ಕುವ ಜಲಪಾತ ರಾಷ್ಟ್ರೀಯ ಹೆದ್ದಾರಿ 150(ಎ) ನಲ್ಲಿ ಪ್ರಯಾಣಿಸುವ ಜನರನ್ನು ಸೆಳೆಯುತ್ತದೆ. ಸಾಮಾಜಿಕ ಅರಣ್ಯ ಇಲಾಖೆ ಅಧೀನಕ್ಕೋಳಪಟ್ಟಿರುವ ಈ ಜಲಪಾತ ವೀಕ್ಷಣೆಗೆ ಆಗಮಿಸುವ ಹೆಚ್ಚಿನ ಯುವಕರು ಹುಚ್ಚಾಟ ಪ್ರದರ್ಶಿಸುತ್ತಾರೆ. ಈ ಹಿಂದೆ ಹುಚ್ಚಾಟ ತೋರಲು ಹೋಗಿ ದೇವದುರ್ಗ ತಾಲೂಕಿನ ಇಬ್ಬರು ಮೃತಪಟ್ಟಿದ್ದರು. ಗೊಲಪಲ್ಲಿ ಗ್ರಾಮಸ್ಥರ ಮತ್ತು ಲಿಂಗಸುಗೂರು ಅಗ್ನಿಶಾಮಕ ದಳದ ಶ್ರಮದಿಂದ ದೇವದುರ್ಗ ತಾಲೂಕಿನ ಮತ್ತೊಬ್ಬ ಯುವಕನ ಜೀವ ರಕ್ಷಿಸಲಾಗಿತ್ತು.
ಪ್ರವಾಸದ ನೆಪದಲ್ಲಿ ಬರುವ ಕೆಲವರು ಅನೈತಿಕ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುತ್ತಾರೆ. ಇದರಿಂದಾಗಿ ಪ್ರವಾಸಿಗರ ಸುರಕ್ಷತೆ ಮತ್ತು ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕಾಗಿದೆ. ಕಳೆದ ಒಂದೂವರೆ ದಶಕದಿಂದ ಈ ಜಲಪಾತ ಪ್ರವಾಸದ ಮುನ್ನೆಲೆಗೆ ಬಂದಿದೆ. ಜಲಪಾತಕ್ಕೆ ಕಾಲ್ನಡಿಗೆ ಇಲ್ಲವೇ ದ್ವಿಚಕ್ರ ವಾಹನದಲ್ಲಿ ಮಾತ್ರ ಹೋಗಬಹುದು. ಇದರಿಂದಾಗಿ ಕಾರುಗಳಲ್ಲಿ ಬರುವವರು ಹೆದ್ದಾರಿ ಬದಿ ಕಾರು ನಿಲ್ಲಿಸಿ ಹೋಗುತ್ತಾರೆ.
ಜಿಲ್ಲೆಯ ಏಕೈಕ ಜಲಪಾತವೆಂಬ ಹಿರಿಮೆ ಗುಂಡಲಬಂಡ ಜಲಪಾತಕ್ಕಿದೆ. ಪ್ರವಾಸೋದ್ಯಮ ಇಲಾಖೆ ಮೂಲ ಸೌಕರ್ಯದೊಂದಿಗೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕೆಂಬ ಆಗ್ರಹವಿದೆ. ಗುಂಡಲಬಂಡ ಜಲಪಾತದ ನೀರು ಬಳಸಿ ವಿದ್ಯುತ್ ಉತ್ಪಾದನೆ ಹಾಗೂ ಏತ ನೀರಾವರಿ ಯೋಜನೆ ಜಾರಿಗೊಳಿಸಲು 2020 ರಲ್ಲಿ ಬಿಜೆಪಿ ಸರ್ಕಾರ ಉದ್ದೇಶಿಸಿತ್ತು. ಇದಕ್ಕಾಗಿ 10 ಸಾವಿರ ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿತ್ತು. ಆದರೆ, ಯೋಜನೆ ಕಾರ್ಯಗತವಾಗಿಲ್ಲ. ಯೋಜನೆ ಕಾರ್ಯಗತಗೊಂಡಿದ್ದರೆ ಉದ್ಯೋಗ ಸೃಷ್ಟಿಯೊಂದಿಗೆ ಸುತ್ತಲಿನ ಹಳ್ಳಿಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಸಿಗುತ್ತಿತ್ತು.