ಸರ್ಕಾರದಿಂದ ಎಲ್ಲ ಸೌಲಭ್ಯ ಕಲ್ಪಿಸಿ ಕೊಡುವೆ

2BK2
ಬಸವಕಲ್ಯಾಣ ತಾಲೂಕಿನ ಗುಣತೀರ್ಥ ವಾಡಿಯಲ್ಲಿ ಇತ್ತೀಚಿಗೆ ಕೊಲೆಯಾದ ಯುವತಿ ನಿವಾಸಕ್ಕೆ ಬುಧವಾರ ಶಾಸಕ ಶರಣು ಸಲಗರ ಭೇಟಿ ನೀಡಿ ಪಾಲಕರಿಗೆ ವೈಯಕ್ತಿಕವಾಗಿ ಒಂದು ಲಕ್ಷ ರೂ ನೀಡಿ ಸಾಂತ್ವಾನ ಹೇಳಿದರು. ಸೂರ್ಯಕಾಂತ ಚಿಲ್ಲಾಬಟ್ಟೆ ಗ್ರಾಮಸ್ಥರು ಇದ್ದರು.
Published on

ಬಸವಕಲ್ಯಾಣ: ಗುಣತೀರ್ಥ ವಾಡಿಯಲ್ಲಿ ಇತ್ತೀಚಿಗೆ ಕೊಲೆಯಾದ ಭಾಗ್ಯಶ್ರೀ ಅವರ ನಿವಾಸಕ್ಕೆ ಬುಧವಾರ ಶಾಸಕ ಶರಣು ಸಲಗರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ವೈಯಕ್ತಿಕವಾಗಿ ಒಂದು ಲಕ್ಷ ರೂ. ನಗದು ನೀಡಿ ಮಾನವೀಯತೆ ಮೆರೆದರು.

ಮಗಳನ್ನು ಕಳೆದುಕೊಂಡು ದುಃಖದಲ್ಲಿದ್ದ ಪಾಲಕರ ಜತೆ ಚರ್ಚಿಸಿ ಅವರ ಸಂಕಷ್ಟಗಳನ್ನು ಆಲಿಸಿದರು. ನಾನು ನಿಮ್ಮ ಜತೆ ಸದಾಕಾಲ ಇರುವೆ, ತೊಂದರೆಯಾದರೆ ನನ್ನ ಗಮನಕ್ಕೆ ತಂದರೆ ಕೈಲಾದಷ್ಟು ಸಹಾಯ ಹಸ್ತ ಚಾಚುವೆ ಎಂದು ಶಾಸಕರು ಅಭಯ ನೀಡಿ ಧೈರ್ಯ ತುಂಬಿದರು.

ಭಾಗ್ಯಶ್ರೀ ಪಾಲಕರು ಬಡವರಾಗಿದ್ದು, ಅವರಿಗೆ ಸರ್ಕಾರದಿಂದ ಸಿಗುವ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿಕೊಡಲು ಪ್ರಯತ್ನಿಸುತ್ತೇನೆ. ಆ ಕುಟುಂಬಕ್ಕೆ ಮನೆ ಕೂಡ ಮಂಜೂರು ಮಾಡಿಸಲಾಗುವದು ಎಂದು ಭರವಸೆ ನೀಡಿದರು.

ಗುಣತೀರ್ಥ ವಾಡಿ ಗ್ರಾಮದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ತೊಂದರೆಯಾಗದ ರೀತಿಯಲ್ಲಿ ಬಸ್ ಸಂಚಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಬಸ್ ಘಟಕದ ವ್ಯವಸ್ಥಾಪಕರಿಗೆ ದೂರವಾಣಿ ಕರೆ ಮಾಡಿ ಶಾಸಕರು ತಾಕೀತು ಮಾಡಿದರು.

ಬೀದರ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಪ್ರದೀಪ ಗುಂಟಿ ಅವರನ್ನು ಶಾಸಕರು ಭೇಟಿ ಮಾಡಿ ಘಟನೆ ಕುರಿತು ಕೆಲ ಕಾಲ ಚರ್ಚಿಸಿದರು. ಕೊಲೆಗೈದವರನ್ನು ಕೂಡಲೇ ಬಂಧಿಸಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಗುರಿ ಪಡಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟ್ಟೆ, ರಾಮಲಿಂಗ ಬಿರಾದಾರ, ಸುಧಾಕರ ಪಾಟೀಲ್,ದೀಪಕ ಗುಂಡೂರ ಮತ್ತು ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net