ನದಿಯಲ್ಲಿ ಸಂಚರಿಸಿದ ಗುಣಧರನಂದಿ ಮಹಾರಾಜರು

Gunadharanandi Maharaja who sailed on the river
ಜಮಖಂಡಿ ತಾಲೂಕಿನ ಮುತ್ತೂರ ಬಳಿ ಕೃಷ್ಣಾ ನದಿಯಲ್ಲಿ ಬೋಟ್‌ನಲ್ಲಿ ಸಂಚರಿಸುತ್ತಿರುವ ಜೈನ ಮುನಿ ಗುಣಧರನಂದಿ ಮಹಾರಾಜರು. ವರ್ಧಮಾನ ನ್ಯಾಮಗೌಡ, ಸಚಿನ ಖಿದ್ರಾಪುರ, ಅಣ್ಣಪ್ಪ ಪರಮಗೊಂಡ, ಶ್ರೀಮಂತ ಖಿದ್ರಾಪುರ ಇದ್ದಾರೆ.
Published on

ಜಮಖಂಡಿ: ಬೆಳಗಾವಿ ಜಿಲ್ಲೆಯ ಗುಂಡವಾಡ ಗ್ರಾಮದಿಂದ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಶ್ರಮಬಿಂದು ಸಾಗರದವರೆಗೆ ಜೈನಮುನಿ ಗುಣಧರನಂದಿ ಮಹಾರಾಜರು ಕೃಷ್ಣಾ ನದಿಯಲ್ಲಿ ಸಂಚರಿಸಿದರು.

ಬೆಳಗಾವಿ ಜಿಲ್ಲೆಯ ಐನಾಪುರದಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ಅಲ್ಲಿಂದ ಮುನಿಗಳು ಪಾದಯಾತ್ರೆ ಮೂಲಕ ಗುಂಡವಾಡ ಗ್ರಾಮ ಬಳಿಯ ಕೃಷ್ಣಾ ತೀರಕ್ಕೆ ಆಗಮಿಸಿದರು. ಅಲ್ಲಿ ಭಕ್ತರು ವ್ಯವಸ್ಥೆ ಮಾಡಿದ್ದ ಬೋಟ್‌ನಲ್ಲಿ ಹತ್ತಿ ಹಿಪ್ಪರಗಿ ಬ್ಯಾರೇಜ್‌ವರೆಗೆ ಆಗಮಿಸಿದರು. ಹಿಪ್ಪರಗಿ ಬ್ಯಾರೇಜ್‌ನಿಂದ ಮುತ್ತೂರು ಬ್ಯಾರೇಜ್‌ವರೆಗೆ, ಅಲ್ಲಿಂದ ಶ್ರಮಬಿಂದು ಸಾಗರವರೆಗೆ ಸುಮಾರು ಮೂರು ಬೋಟ್‌ಗಳನ್ನು ಬದಲಾಯಿಸಿ 50ಕ್ಕೂ ಅಧಿಕ ಕಿ.ಮೀ.ವರೆಗೆ ನದಿ ಮಾರ್ಗದಲ್ಲಿ ಸಂಚರಿಸಿದರು.

ತಾಲೂಕಿನ ಆಲಗೂರ ಗ್ರಾಮದಲ್ಲಿ ಪಂಚಕಲ್ಯಾಣ ಪೂಜೆ ಜರುಗಲಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಲು ಮುನಿಗಳು ನದಿ ಮಾರ್ಗ ಮೂಲಕ ಆಗಮಿಸಿದ್ದು ಭಕ್ತರಲ್ಲಿ ಪುಳಕ ಉಂಟು ಮಾಡಿತು.

ಶ್ರಮಬಿಂದು ಸಾಗರಕ್ಕೆ ನದಿ ಮಾರ್ಗದಲ್ಲಿ ಮಹಾರಾಜರು ಆಗಮಿಸುತ್ತಿದ್ದಂತೆ ಆಲಗೂರು ಗ್ರಾಮದ ಮಹಿಳೆಯರು ಕುಂಭ, ಆರತಿ, ಸಕಲ ವಾದ್ಯಮೇಳದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಗ್ರಾಮಕ್ಕೆ ಮುನಿಗಳನ್ನು ಸ್ವಾಗತಿಸಿದರು.

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣೆ ತುಂಬಿ ಹರಿಯುತ್ತಿದ್ದು, ನದಿಯಲ್ಲಿ ಮುನಿಗಳು ಸಂಚರಿಸುತ್ತಿರುವುದನ್ನು ನದಿ ತೀರದ ಭಕ್ತರು ಕುತೂಹಲದಿಂದ ವೀಕ್ಷಿಸಿದರು.

ಪ್ರಾಣ ಹಿಂಸೆ ಆಗಬಾರದು ಎಂದು ಜೈನಮುನಿಗಳು ರಸ್ತೆ ಮಾರ್ಗವಾಗಿ ವಾಹನಗಳಲ್ಲಿ ಸಂಚರಿಸುವುದಿಲ್ಲ. ಹೀಗಾಗಿ ನದಿ ಮಾರ್ಗವಾಗಿ ಮುನಿಗಳು ನಮ್ಮ ಗ್ರಾಮಕ್ಕೆ ಆಗಮಿಸಿದ್ದಾರೆ ಎಂದು ಭಕ್ತರು ಪತ್ರಿಕೆಗೆ ತಿಳಿಸಿದರು.

ವರ್ಧಮಾನ ನ್ಯಾಮಗೌಡ, ಸಚಿನ ಖಿದ್ರಾಪುರ, ಅಣ್ಣಪ್ಪ ಪರಮಗೊಂಡ, ಶ್ರೀಮಂತ ಖಿದ್ರಾಪುರ, ಶೀತಲ ಮಗದುಮ್, ರಾಮು ಯಲಗುದ್ರಿ, ಆದಿನಾಥ ನರಸಗೊಂಡ ಇದ್ದರು.

ವಾಹನಗಳಲ್ಲಿ ಸಂಚರಿಸಿದರೆ ನಮಗೆ ಗೊತ್ತಾಗದಂತೆ ಪ್ರಾಣಿ ಹಿಂಸೆ ಆಗುತ್ತದೆ. ನದಿಯಲ್ಲಿ ಸಂಚರಿಸುವುದರಿಂದ ಪ್ರಾಣಿ ಹಿಂಸೆ ಆಗುವುದಿಲ್ಲ ಎಂದು ಮೊದಲಿನಿಂದಲೂ ಜೈನಮುನಿಗಳು ನದಿ ಮಾರ್ಗದಲ್ಲಿ ಸಂಚರಿಸುವ ಪದ್ಧತಿ ಇದೆ. ಗುಣಧರನಂದಿ ಮಹಾರಾಜರು ನದಿ ಮಾರ್ಗದ ಮೂಲಕ ನಮ್ಮೂರಿಗೆ ಆಗಮಿಸಿದ್ದು ನಮಗೆಲ್ಲ ಸಂತಸವಾಗಿದೆ. -ವರ್ಧಮಾನ ನ್ಯಾಮಗೌಡ, ಜೈನ ಸಮಾಜದ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net