ಗುಂಡಿಮಯವಾದ ಗುಮ್ಮಟ ನಗರಿ, ಕೆಆರ್‌ಎಸ್ ಪಕ್ಷದಿಂದ ವಿನೂತನ ಪ್ರತಿಭಟನೆ

KRS PROTEST GUNDI
ವಿಜಯಪುರ ನಗರದ ಪ್ರಮುಖ ರಸ್ತೆಗಳ ಮಧ್ಯದಲ್ಲಿರುವ ಗುಂಡಿಗಳಲ್ಲಿ ಹೂವು ಚೆಲ್ಲಿ ಶ್ರದ್ಧಾಂಜಲಿ ಅರ್ಪಿಸಿದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು. ಶಿವಾನಂದ ಯಡಹಳ್ಳಿ, ವಿಕ್ರಮ ವಾಗಮೊರೆ, ದುರ್ಗಪ್ಪ ಬೂದಿಹಾಳ, ಸೀನು ಹಿಪ್ಪರಗಿ ಇದ್ದಾರೆ.
Published on

ವಿಜಯಪುರ: ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಗುಮ್ಮಟ ನಗರಿಯ ಪ್ರಮುಖ ರಸ್ತೆಗಳೆಲ್ಲ ಹಾಳಾಗಿದ್ದು, ಆಳೆತ್ತರ ಗುಂಡಿಗಳು ಸುಗಮ ಸಂಚಾರಕ್ಕೆ ಸಂಚಕಾರ ಒದಗಿಸಿವೆ. ಇಂಥ ಗುಂಡಿಗಳನ್ನು ಮುಚ್ಚದೇ ಕಳಪೆ ಕಾಮಗಾರಿಗೆ ಕೈಗನ್ನಡಿಯಾಗಿರುವ ರಸ್ತೆಗಳಲ್ಲಿ ಹೂವು ಚೆಲ್ಲಿ ಆಡಳಿತ ವರ್ಗಕ್ಕೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ವಿನೂತನವಾಗಿ ಪ್ರತಿಭಟಿಸಿದರು.

ಶುಕ್ರವಾರ ನಗರದ ಹೃದಯ ಭಾಗದಲ್ಲಿರುವ ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳ ದರ್ಶನ ಮಾಡಿದ ಪದಾಧಿಕಾರಿಗಳು ಹೂಮಾಲೆ ಚೆಲ್ಲಿ, ಆಡಳಿತ ವರ್ಗದ ವಿರುದ್ಧ ಘೋಷಣೆ ಕೂಗಿ, ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

ನಗರದಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಇದರಿಂದಾಗಿ ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಬಿದ್ದಿರುವ ಗುಂಡಿಗಳನ್ನು ಮಳೆಗಾಲದ ಮುನ್ಸೂಚನೆಯನ್ನು ಅರಿತು ಮುಚ್ಚುವ ಕಾರ್ಯವನ್ನು ಮಹಾನಗರ ಪಾಲಿಕೆ ಮಾಡಬಹುದಾಗಿತ್ತು. ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾಗಿ ನಗರದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಮಳೆಗಾಲದ ಸಮಯವಾಗಿದ್ದರಿಂದಾಗಿ ಗುಂಡಿಗಳು ನೀರಿನಿಂದ ತುಂಬಿಕೊಳ್ಳುತ್ತವೆ . ಗುಂಡಿಗಳ ಆಳ ಅಗಲ ಗೊತ್ತಿಲ್ಲದೆ ವಾಹನ ಸವಾರರು ಬಿದ್ದು ಕೈಕಾಲುಗಳನ್ನು ಮುರಿದುಕೊಳ್ಳುತ್ತಿದ್ದಾರೆ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಹರಿಹಾಯ್ದರು.

ಮಹಾನಗರ ಪಾಲಿಕೆಯ ಅಧಿಕಾರಿಗಳು ಗುಂಡಿ ಮುಚ್ಚುವುದರ ಮೂಲಕ ನಗರದ ನಾಗರಿಕರ ಜೀವವನ್ನು ಉಳಿಸಬೇಕಾಗಿದೆ ಇಲ್ಲದೇ ಹೋದಲ್ಲಿ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದರು.

ಮುಖಂಡರಾದ ವಿಕ್ರಮ ವಾಗಮೊರೆ, ದುರ್ಗಪ್ಪ ಬೂದಿಹಾಳ, ಸೀನು ಹಿಪ್ಪರಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net