

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗಿನಲ್ಲಿ ಜಮ್ಮಾ ಹಿಡುವಳಿ ಹೊಂದಿರುವವರು ಹಾಗೂ ಕೂರ್ಗ್ ಬೈ ರೇಸ್‌ನಡಿ ಕೊಡವರಿಗೆ ಬಂದೂಕು ಪರವಾನಗಿ ಪಡೆಯುವುದ ರಿಂದ ವಿನಾಯಿತಿ ನೀಡಲಾಗಿದೆ. ಈ ಒಂದು ವಿಶೇಷ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ಹಲವು ವರ್ಷದಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. ಏತನ್ಮಧ್ಯೆ, ಪರವಾನಗಿದಾರರಿಗೆ ಸಂಬಂಧಿಸಿದ್ದಂತೆ ಸರ್ಕಾರ ಹೊರಡಿಸಿರುವ ಆದೇಶವನ್ನಿಟ್ಟುಕೊಂಡು ವಿನಾಯಿತಿ ಪತ್ರದಾರರಿಗೂ ಪೊಲೀಸ್ ನೋಟಿಸ್ ಜಾರಿ ಮಾಡಿರುವುದಕ್ಕೆ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಆಯುಧ ತಿದ್ದುಪಡಿ ಕಾಯ್ದೆ ೨೦೧೯ ರನ್ವಯ ಪರವಾನಗಿದಾರರು ಹೊಂದಿರುವ ೨ ಕ್ಕಿಂತ ಹೆಚ್ಚಿನ ಕೋವಿ ಹಿಂಪಡೆಯುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ನೀಡಿತ್ತು. ಇದರನ್ವಯ ಜಿಲ್ಲಾಡಳಿತ ಹೊರಡಿಸಿರುವ ಆದೇಶವನ್ನಿಟ್ಟುಕೊಂಡು ವಿಶೇಷವಾದ ವಿನಾಯಿತಿ ಪತ್ರ ಹೊಂದಿರುವವರಿಗೂ ಪೊಲೀಸ್ ನೋಟಿಸ್ ಜಾರಿ ಮಾಡುತ್ತಿರುವುದು ಪ್ರತಿರೋಧ ವ್ಯಕ್ತವಾಗುವಂತೆ ಮಾಡಿದೆ.
ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ವಿನಾಯಿತಿ ಪತ್ರದಾರರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿರುವುದನ್ನು ವಿಜಯವಾಣಿ ಬಹಿರಂಗ ಪಡಿಸಿತ್ತು. ಪೊಲೀಸ್ ನೋಟಿಸ್ ಬಗ್ಗೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಕೋವಿ ವಿಶೇಷ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ದ ಭಾಗ ಇದಾಗಿದೆ ಎಂಬ ಆಕ್ರೋಶ ಜನವಲಯದಿಂದ ವ್ಯಕ್ತವಾಗುತ್ತಿದೆ.
ವಿನಾಯಿತಿ ಪತ್ರ ಹೊಂದಿರುವವರು ಕಾನೂನು ಬದ್ಧವಾಗಿ ಮೂರು ಬಂದೂಕು ಇಟ್ಟುಕೊಂಡಿದ್ದಾರೆ. ಈಗ ಒಂದನ್ನು ಠೇವಣಿಯಾಗಿ ಇಡಬೇಕೆಂದು ನೋಟಿಸ್ ಜಾರಿ ಮಾಡುವುದರ ಮೂಲಕ ಭಾವನೆಗೆ ಧಕ್ಕೆವುಂಟು ಮಾಡುವ ಕೆಲಸ ಜಿಲ್ಲಾಡಳಿತ ಮೂಲಕ ನಡೆದಿದೆ. ಪರವಾನಗಿ ಮತ್ತು ವಿನಾಯಿತಿ ಪತ್ರದ ನಡುವಿನ ವ್ಯತ್ಯಾಸದ ಬಗ್ಗೆ ಅಧಿಕಾರಿಗಳಿಗೆ ಅರಿವು ಇಲ್ಲ ಎಂಬ ಟೀಕೆ ವ್ಯಕ್ತವಾಗಿದೆ.
ಕೋವಿ ಕೊಡಗಿನವರ ಪಾಲಿಗೆ ಭಾವನಾತ್ಮಕ ವಿಚಾರವಾಗಿರುವುದರಿಂದ ಜಿಲ್ಲಾಡಳಿತ ಯಾವುದೇ ಆದೇಶ ಹೊರಡಿಸುವ ಮುನ್ನ ತಜ್ಞ ರೊಂದಿಗೆ ಚರ್ಚಿಸಬೇಕಾಗಿತ್ತು. ಕೇಂದ್ರ ಗೃಹ ಸಚಿವಾಲಯ ಸ್ಪಷ್ಟವಾಗಿ ಪರವಾನಗಿದಾರರಿಗೆ ಅನ್ವಯ ಆಗುವಂತೆ ಸುತ್ತೋಲೆ ಹೊರಡಿಸಿರು ವಾಗ ವಿನಾಯಿತಿ ಪತ್ರದಾರರಿಗೂ ನೋಟಿಸ್ ನೀಡುವ ಅಗತ್ಯತೆ ಏನಿತ್ತೆಂಬ ಪ್ರಶ್ನೆ ಎದ್ದಿದೆ. ವಿನಾಯಿತಿ ಪತ್ರದಾರರಿಗೆ ಪೊಲೀಸ್ ನೋಟಿಸ್ ಜಾರಿ ಆಗಿರುವ ಹಿನ್ನೆಲೆಯಲ್ಲಿ ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.
**
ವಿನಾಯಿತಿ ಪತ್ರದ ಆಧಾರದಲ್ಲಿ ಬಂದೂಕು ಹೊಂದಿರುವವರು ಪೊಲೀಸ್ ನೋಟಿಸ್ ಆಧಾರದಲ್ಲಿ ೨ ಕ್ಕಿಂತ ಹೆಚ್ಚು ಬಂದೂಕು ಇದ್ದಲ್ಲಿ ಠೇವಣಿ ಇಡಬೇಕಾಗಿಲ್ಲ. ವಿನಾಯಿತಿ ಪತ್ರ ಹೊಂದಿರುವವರು ಯಾರೂ ಠೇವಣಿ ಇಡಬೇಡಿ ಎಂದು ಮನವಿ ಮಾಡುತ್ತೇನೆ. ಪರವಾನಗಿ ವಿಚಾರಕ್ಕೆ ಬಂದ ಸುತ್ತೋಲೆಯನ್ನು ವಿನಾಯಿತಿ ಪತ್ರದಾರರಿಗೆ ಅನ್ವಯ ಆಗುವಂತೆ ಮಾಡಿರುವುದು ಸರಿಯಲ್ಲ. ಅಗತ್ಯವಾದ್ದಲ್ಲಿ ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಲಾಗುವುದು. ಪಳೆಯಂಡ ರಾಬಿನ್ ದೇವಯ್ಯ, ಬಿಜೆಪಿ ಜಿಲ್ಲಾಧ್ಯಕ್ಷರು.
**
ಜಿಲ್ಲಾಧಿಕಾರಿ ಆದೇಶದನ್ವಯ ಹೆಚ್ಚುವರಿ ಬಂದೂಕು ಠೇವಣಿ ಇಡುವಂತೆ ಪೊಲೀಸರು ವಿನಾಯಿತಿ ಪತ್ರ ಹೊಂದಿರುವವರಿಗೂ ನೋಟಿಸ್ ಜಾರಿ ಮಾಡಿರುವುದು ಸರಿಯಾದ ಕ್ರಮವಲ್ಲ. ಭಾರತೀಯ ಆಯುಧ ಕಾಯ್ದೆಯಲ್ಲಿಯೇ ಜಮ್ಮಾ ಹಿಡುವಳಿದಾರರು ಹಾಗೂ ಕೂರ್ಗ್ ಬೈ ರೇಸ್‌ನಡಿ ಕೊಡವರಿಗೆ ಬಂದೂಕು ಪರವಾನಗಿ ಪಡೆಯಲು ವಿನಾಯಿತಿ ನೀಡಲಾಗಿದೆ. ಜಿಲ್ಲಾಧಿಕಾರಿ ತಕ್ಷಣ ತಜ್ಞರ ಸಭೆ ಕರೆದು ಚರ್ಚಿ ಸಬೇಕು. ತೀತೀರ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷರು.
**
ಅಧಿಕಾರಿಗಳು ಬಂದೂಕು ಪರವಾನಿಗೆ ಮತ್ತು ವಿನಾಯಿತಿ ಪತ್ರ ನಡುವೆ ಇರುವ ವ್ಯತ್ಯಾಸ ಮೊದಲು ಅರ್ಥ ಮಾಡಿಕೊಳ್ಳಬೇಕು. ಪರವಾನಗಿಯಿಂದ ವಿನಾಯಿತಿ ನೀಡುವುದೇ ನಮಗೆ ನೀಡಿರುವ ವಿಶೇಷ ಹಕ್ಕು. ಪರವಾನಗಿ ನಿಯಮ ವಿನಾಯಿತಿ ಪತ್ರ ಹೊಂದಿರುವ ವರಿಗೆ ಅನ್ವಯಿಸುವುದಿಲ್ಲ. ಕೋವಿ ಪರವಾನಗಿ ನಿಯಮವನ್ನು ಕೋವಿ ವಿನಾಯಿತಿ ಹೊಂದಿರುವ ಕೊಡವರ ಹಾಗೂ ಜಮ್ಮ ಹಿಡುವಳಿ ನಿವಾಸಿಗಳ ಮೇಲೆ ಹೇರುತ್ತಿರುವುದು ಅಧಿಕಾರಿಗಳ ಬೇಜವಾಬ್ದಾರಿತನ. ಅಗತ್ಯವಾದರೆ ನ್ಯಾಯಾಲಯ ಮೊರೆ ಹೋಗಲಾಗುವುದು.
ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಅಧ್ಯಕ್ಷರು. ಯುನೈಟೆಡ್ ಕೊಡವ ಆರ್ಗನೈಷಶನ್.
**
ಕೊಡವರು ಅನಾದಿ ಕಾಲದಿಂದಲೂ ತಿರಿಕೋವಿ ಮತ್ತು ಕೇಪು ಕೋವಿ ಬಳಸುತ್ತಿದ್ದವರು. ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಕೋವಿ ಯನ್ನು ಪೂಜಿಸುತ್ತಿದ್ದರು. ಜಿಲ್ಲೆಗೆ ಬರುವ ಅಧಿಕಾರಿಗಳು ಕೊಡಗಿನ ವಿಶೇಷ ಕೋವಿ ಹಕ್ಕುಗಳನ್ನು ಗೊಂದಲಕಾರಿಯಾಗಿ ಮಾಡುತ್ತಿದ್ದಾರೆ. ಶಾಸಕರ ಶಿಫಾರಸ್ಸಿನಡಿ ನೇಮಕಗೊಂಡಿರುವ ಡಿಸಿ ಏಕೆ ಈ ರೀತಿಯ ಗೊಂದಲ ಎಬ್ಬಿಸುತ್ತಿದ್ದಾರೆ. ಜನಪ್ರತಿನಿಧಿಗಳು ಸಹ ಮೌನವಾಗಿರುವ ಮರ್ಮವೇನು. ಹುನ್ನಾರದ ವಿರುದ್ಧ ಹೋರಾಟ ನಡೆಸಲಾಗುವುದು. ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಸಂಚಾಲಕರು, ಜಬ್ಬೂಮಿ ಕೊಡವ ಚಾರಿಟೇಬಲ್ ಟ್ರಸ್ಟ್.
**
ಜಿಲ್ಲಾಧಿಕಾರಿ ಕೊಡಗಿನ ವಿಶೇಷ ಕೋವಿ ಹಕ್ಕಿನ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಬೇಕು. ಅನಗತ್ಯವಾಗಿ ಗೊಂದಲ ಸೃಷ್ಟಿಸ ಬಾರದು. ಪರವಾನಗಿ ಹೊಂದಿರುವ ಕೋವಿ ಹೊಂದಿರುವವರಿಗೆ ಇರುವ ನಿಯಮವನ್ನು ವಿಶೇಷ ವಿನಾಯಿತಿ ಹೊಂದಿರುವ ಕೋವಿ ಹಕ್ಕುದಾರರ ಮೇಲೆ ಜಾರಿ ಮಾಡುತ್ತಿರುವುದು ಸರಿಯಲ್ಲ. ಜನರಲ್ಲಿ ಈ ರೀತಿಯ ಗೊಂದಲ ಮೂಡಿಸುವುದನ್ನು ನಿಲ್ಲಿಸಬೇಕು.
ಕಾಳಿಮಾಡ ಎಂ. ಮೋಟಯ್ಯ, ಅಧ್ಯಕ್ಷರು, ಪೊನ್ನಂಪೇಟೆ ಕೊಡವ ಸಮಾಜ.
**
ಕೊಡವರ ಪಾಲಿಗೆ ಕೋವಿ ಬದುಕಿನ ಅವಿಭಾಜ್ಯ ಅಂಗ. ಕಳೆದ ಹಲವು ವರ್ಷದಿಂದ ಕೊಡವರು ಹೊಂದಿರುವ ಕೋವಿ ವಿಶೇಷ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಒಂದು ಜನಾಂಗದ ಸಂಸ್ಕೃತಿಯ ಭಾಗವಾಗಿರುವುದನ್ನು ಕಿತ್ತುಕೊಳ್ಳುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನ ಖಂಡನೀಯ. ಕೋವಿ ವಿಶೇಷ ಹಕ್ಕಿನ ಮಹತ್ವದ ಬಗ್ಗೆ ಜನಾಂಗದಲ್ಲಿ ಅರಿವು ಮೂಡಿಸಲು ತೋಕ್ ನಮ್ಮೆ ಆಯೋಜಿಸುತ್ತಾ ಬಂದಿದ್ದೇವೆ. ನಂದಿನೆರವಂಡ ಯು. ನಾಚಪ್ಪ ಕೊಡವ, ಅಧ್ಯಕ್ಷರು, ಕೊಡವ ನ್ಯಾಷನಲ್ ಕೌನ್ಸಿಲ್.
**
ಅನಾದಿಕಾಲದಿಂದ ಜಮ್ಮಾ ಹಿಡುವಳಿದಾರರು ಹಾಗೂ ಕೂರ್ಗ್ ಬೈ ರೇಸ್‌ನಡಿ ಕೊಡವರು ಹೊಂದಿರುವ ಕೋವಿ ಪರವಾನಗಿ ವಿಶೇಷ ವಿನಾಯಿತಿಯನ್ನು ಕೇಂದ್ರ ಸರ್ಕಾರ ೧೦ ವರ್ಷ (೨೦೨೯) ಕ್ಕೆ ಸೀಮಿತಗೊಳಿಸಿ ಆದೇಶ ಹೊರಡಿಸಿರುವುದು ಸರಿಯಲ್ಲ. ಇದರೊಂದಿಗೆ ಪರವಾನಗಿದಾರರಿಗೆ ಸಂಬಂಧಿಸಿದ್ದಂತೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಆದೇಶವನ್ನು ವಿನಾಯಿತಿ ಪತ್ರದಾರರಿಗೂ ಅನ್ವಯ ಆಗುವಂತೆ ಮಾಡಿರುವುದು ಸರಿಯಲ್ಲ. ತಜ್ಞರೊಂದಿಗೆ ಚರ್ಚಿಸಿ ಡಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಎ.ಎಸ್. ಪೊನ್ನಣ್ಣ, ಹೈಕೋರ್ಟ್ ಹಿರಿಯ ವಕೀಲರು.
**
ಕೋವಿ ವಿಶೇಷ ಹಕ್ಕಿನ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೊರತೆ ಇದೆ. ಮಾಹಿತಿ ಕೊರತೆಯಿಂದ ಈ ರೀತಿಯ ಆದೇಶ ಹೊರಬರುತ್ತದೆ. ಕೊಡಗಿನ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ವಿಶೇಷ ಹಕ್ಕಿನ ಬಗ್ಗೆ ಮನವರಿಕೆ ಮಾಡಿಕೊಡುವುದರ ಮೂಲಕ ಮಾಹಿತಿ ಕೊರತೆ ದೂರ ಮಾಡಬೇಕು. ಕೋವಿ ವಿಶೇಷ ಹಕ್ಕು ಕಿತ್ತುಕೊಳ್ಳುವ ಯಾವ ಪ್ರಯತ್ನಕ್ಕೂ ನಮ್ಮ ವಿರೋಧವಿದೆ. ಮನೆಯಪಂಡ ಕಾಂತಿ ಸತೀಶ್, ಅಧ್ಯಕ್ಷೆ, ವಿರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್.