ಬಂದೂಕು ವಿನಾಯಿತಿ ಪತ್ರಕ್ಕೆ ವಿನಾಯಿತಿ

30mdkn5 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಬಂದೂಕು ಪರವಾನಗಿ ವಿನಾಯಿತಿ ಪತ್ರ ಹೊಂದಿದವರಿಗೂ ೨ಕ್ಕಿಂತ ಹೆಚ್ಚುವರಿ ಬಂದೂಕು ಇದ್ದಲ್ಲಿ ಠೇವಣಿ ಇಡುವಂತೆ ಪೊಲೀಸ್ ನೋಟಸ್ ಜಾರಿ ಮಾಡಿದ್ದು ಚರ್ಚೆಗೆ ಗ್ರಾಸ ಒದಗಿಸಿತ್ತು. ವಿವಾದದ ಸ್ಪರೂಪ ಪಡೆಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿದ್ದುಪಡಿ ಆದೇಶ ಹೊರಡಿಸಿದ್ದಾರೆ.

ಶಸ್ತಾಸ್ತ್ರ (ತಿದ್ದುಪಡಿ) ಕಾಯ್ದೆ ೨೦೧೯ ಅನುಷ್ಠಾನಕ್ಕೆ ಸಂಬಂಧಿಸಿದ್ದಂತೆ ಕೇಂದ್ರ ಗೃಹ ಸಚಿವಾಲಯದ ಆದೇಶದನ್ವಯ ಬಂದೂಕು ಪರವಾನಗಿ ದಾರರು ೨ಕ್ಕಿಂತ ಹೆಚ್ಚು ಬಂದೂಕು ಹೊಂದಿದ್ದಲ್ಲಿ ಹೆಚ್ಚುವರಿ ಬಂದೂಕು ಠೇವಣಿ ಇಡುವಂತೆ ಆದೇಶಿಸಿತ್ತು. ಆದರೆ, ಕೊಡಗು ಜಿಲ್ಲಾಡಳಿತ ಪರವಾನಗಿದಾರರೊಂದಿಗೆ ವಿನಾಯಿತಿ ಪತ್ರ ಹೊಂದಿದ್ದವರನ್ನು ಸೇರಿಸಿದ್ದು ವಿವಾದಕ್ಕೆ ಕಾರಣವಾಯಿತು. ಈ ಬಗ್ಗೆ ವಿಜಯವಾಣಿ ಗಮನ ಸೆಳೆಯುವ ವರದಿ ಪ್ರಕಟಿಸಿತ್ತು.

ಜಿಲ್ಲಾಧಿಕಾರಿ ಕಚೇರಿ ಪತ್ರದಲ್ಲಿ ಶಸ್ತಾಸ್ತ್ರ (ತಿದ್ದುಪಡಿ) ಕಾಯ್ದೆ ೨೦೧೯ ರ ಅನುಷ್ಠಾನ ಕುರಿತು ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿತ್ತು. ಈ ಆದೇಶದಲ್ಲಿ ಬಂದೂಕು ಪರವಾನಗಿ/ ವಿನಾಯಿತಿ ಪತ್ರದಲ್ಲಿ ೨ಕ್ಕಿಂತ ಹೆಚ್ಚು ಬಂದೂಕು ಹೊಂದಿರುವವರ ಮಾಹಿತಿ ಹಾಗೂ ಹೆಚ್ಚುವರಿ ಬಂದೂಕನ್ನು ಠೇವಣಿ ಮಾಡಿರುವ ಬಗ್ಗೆ ಮಾಹಿತಿ ಸಲ್ಲಿಸುವಂತೆ ಸೂಚಿಸಲಾತ್ತು.

ಜಿಲ್ಲಾಧಿಕಾರಿ ಪತ್ರದ ಆದೇಶವನ್ನು ಭಾಗಶಃ ಮಾರ್ಪಡಿಸಿ, ಶಸ್ತಾಸ್ತ್ರ (ತಿದ್ದುಪಡಿ) ಕಾಯ್ದೆ ೨೦೧೯ ರನ್ವಯ ಬಂದೂಕು ಪರವಾನಗಿಯಡಿ ೨ಕ್ಕಿಂತಲೂ ಹೆಚ್ಚು ಬಂದೂಕು ಹೊಂದಿರುವ ಬಂದೂಕು ಪರವಾನಗಿದಾರರು ಮಾತ್ರ ಹೆಚ್ಚುವರಿ ಬಂದೂಕನ್ನು ಠೇವಣಿ ಮಾಡಲು ಕ್ರಮ ವಹಿಸಲು ಹಾಗೂ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂದೂಕು ಪರವಾನಗಿಯಲ್ಲಿ ೨ಕ್ಕಿಂತ ಹೆಚ್ಚು ಬಂದೂಕು ಹೊಂದಿರುವವರು ಬಂದೂಕು ಗಳನ್ನು ಠೇವಣಿ ಇರಿಸಲು ಕ್ರಮಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ನ.೨೯ ರಂದು ಹೊಸ ಆದೇಶ ಹೊರಡಿಸಿದ್ದಾರೆ. ಕೈಗೊಂಡ ಕ್ರಮ ದ ಬಗ್ಗೆ ೭ ದಿನದೊಳಗೆ ವರದಿ ಮಾಡುವಂತೆ ಸರ್ಕಲ್ ಇನ್ಸ್‌ಪೆಕ್ಟರ್‌ಗಳು, ಸಬ್ ಇನ್ಸ್‌ಪೆಕ್ಟರ್‌ಗಳಿಗೆ ಆದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net