ಗುಮ್ಮಟನಗರಿ ತುಂಬ ಗುಂಡಿಗಳೇ...! ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಲೇವಡಿ

APPU PATTANASHETTI
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸುದ್ದಿಗೋಷ್ಠಿ ನಡೆಸಿದರು.
Published on

ವಿಜಯಪುರ: ಗುಮ್ಮಟ ನಗರಿಯ ಪ್ರಮುಖ ರಸ್ತೆಗಳೆಲ್ಲ ಹದಗೆಟ್ಟಿದ್ದು, ಪ್ರಮುಖ ಮಾರ್ಗಗಳೆಲ್ಲ ಗುಂಡಿಗಳಿಂದಾವೃತವಾಗಿವೆ. ಹೀಗಾಗಿ ಕೂಡಲೇ ರಸ್ತೆಗಳನ್ನು ಸುಧಾರಿಸಿ ಗಣೇಶ ಮೆರವಣಿಗೆಗೆ ಅನುಕೂಲ ಮಾಡಿಕೊಡಬೇಕೆಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆಗ್ರಹಿಸಿದರು.

ಮಳೆಯಿಂದಾಗಿ ರಸ್ತೆಗಳೆಲ್ಲ ಹಾಳಾಗಿವೆ. ಭೂಮಿ ಪೂಜೆ, ರಸ್ತೆ ಕಾಮಗಾರಿಗೆ ಚಾಲನೆ ಎಂದೆಲ್ಲಾ ಫೋಟೊ ಕ್ಲಿಕ್ಕಿಸಿಕೊಳ್ಳುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆ ರಸ್ತೆಗಳ ಸ್ಥಿತಿಗತಿ ಕಡೆಗೊಮ್ಮೆ ಗಮನ ಕೊಡಬೇಕು. ಎಲ್ಲ ರಸ್ತೆಗಳು ಹಾಳಾಗಿದ್ದು, ಭ್ರಷ್ಟಾಚಾರ ನಡೆದಿದೆ ಎಂಬ ಜನರ ಆರೋಪಕ್ಕೆ ಉತ್ತರವಾಗಿ ರಸ್ತೆಗಳ ಕುರಿತು ಮಾಹಿತಿ ನೀಡಬೇಕಲ್ಲದೇ ಅನುದಾನದ ವಿವರ ನೀಡಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಗೆ ರಸ್ತೆಗಳ ಕುರಿತು ಮಾಹಿತಿ ಕೇಳಲಾಗಿ ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ. 2004 ರಿಂದ ಈವರೆಗೆ ಎಷ್ಟು ರಸ್ತೆ ಕಾಮಗಾರಿಗಳಾಗಿವೆ ಎಂದು ಪ್ರಶ್ನೆ ಕೇಳಿದರೆ ಬೆರಳೆಣಿಕೆಯಷ್ಟು ಮಾಹಿತಿ ನೀಡಲಾಗಿದೆ. ಆದರೆ, ಇಡೀ ಕ್ಷೇತ್ರದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಅನುದಾನದ ದುರುಪಯೋಗವಾಗಿದೆ ಎಂಬ ಆರೋಪ ವ್ಯಾಪಕವಾಗಿದೆ. ಕೆಲವು ರಸ್ತೆಗಳಂತೂ ನಿರ್ಮಾಣಗೊಂಡ ಒಂದೇ ವರ್ಷದಲ್ಲಿ ಹಾಳಾಗಿವೆ. ಯಾರಿಂದ ಎಲ್ಲಿ ಭ್ರಷ್ಟಾಚಾರ ನಡೆದಿದೆ? ಅಧಿಕಾರಿಗಳಿಂದಲೋ... ಜನಪ್ರತಿನಿಧಿಗಳಿಂದಲೋ....ಎಂಬುದು ಬಹಿರಂಗಗೊಳ್ಳಬೇಕೆಂದು ಆಗ್ರಹಿಸಿದರು.

ನಗರದಲ್ಲಿ ಮಹಾನಗರ ಪಾಲಿಕೆ, ವಿಡಿಎ ಸೇರಿದಂತೆ ಹಲವು ಇಲಾಖೆಗಳು ಇದ್ದೂ ಇಲ್ಲದಂತಾಗಿವೆ. ಪಾಲಿಕೆ ಸದಸ್ಯರು ತಮ್ಮ ಬಹುತೇಕ ಅವಧಿ ಕೋರ್ಟ ನಲ್ಲೇ ಕಳೆದಿದ್ದಾರೆ. ಮೇಯರ್-ಉಪಮೇಯರ್ ಕೆಟಗರಿಗಾಗಿ, ಫಲಿತಾಂಶಕ್ಕಾಗಿ, ಸದಸ್ಯತ್ವ ಅನರ್ಹತೆ ಕಾರಣಕ್ಕಾಗಿ..ಹೀಗೆ ಅನೇಕ ಕಾರಣಗಳಿಂದಾಗಿ ಕೋರ್ಟ್‌ನಲ್ಲೇ ಅವಧಿ ಪೂರೈಸಿದ್ದಾರೆ. ವಿಡಿಎ ಅಧ್ಯಕ್ಷ ನಾಮಕಾವಸ್ಥೆ ಅಧಿಕಾರ ಅನುಭವಿಸುತ್ತಿದ್ದಾರೆನ್ನಲಾಗುತ್ತಿದ್ದು, ಅವರಿಗೆ ಯಾವುದೇ ಪವರ್ ಇಲ್ಲವೆಂಬ ಮಾತು ಹರಿದಾಡುತ್ತಿದೆ. ನಾಗಠಾಣ ಕ್ಷೇತ್ರದ ವಾರ್ಡ್‌ಗಳಲ್ಲೂ ಕಳಪೆ ಕಾಮಗಾರಿಗಳಾಗಿವೆ. ಅಭಿವೃದ್ಧಿ ಕೆಲಸದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಮಾತೆತ್ತಿದರೆ ವಿಜಯಪುರ ಸಿಂಗಾಪುರ, ಅಮೇರಿಕಾ ಮಾಡಿದ್ದಾರೆಂದು ಶಾಸಕರು ಹೇಳುತ್ತಾರೆ. ನಿಜಕ್ಕೂ ನಗರ ಕ್ಷೇತ್ರ ಸಿಂಗಾಪುರವೋ ಅಮೇರಿಕಾವೋ ಎಂಬುದನ್ನು ಜನ ಗಮನಿಸುತ್ತಿದ್ದಾರೆಂದು ಲೇವಡಿ ಮಾಡಿದರು.

ಸರ್ಕಾರಿ ವೈದ್ಯಕೀಯ ಕಾಲೇಜ್

ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಮಂಜೂರಿಸಬೇಕು. ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿಯಲ್ಲಿ ಕಾಲೇಜ್ ಸ್ಥಾಪಿಸಬಾರದು. ಯಾವುದೇ ಸರ್ಕಾರವಾಗಲಿ ಪಿಪಿಪಿ ಮಾದರಿ ಮಾಡಕೂಡದು. ರಾಜ್ಯದಲ್ಲಿ ಬೇರೆ ಕಡೆ ಬೇಕಾದರೆ ಮಾಡಿಕೊಳ್ಳಲಿ ಜಿಲ್ಲೆಯಲ್ಲಿ ಮಾತ್ರ ಪಿಪಿಪಿ ಮಾದರಿ ಬೇಡ. ಬಿಜೆಪಿ ಸರ್ಕಾರವೇ ಈ ನಿರ್ಧಾರ ಕೈಗೊಂಡಿದ್ದರೂ ವಿಜಯಪುರ ನಗರದಲ್ಲಿ ಮಾತ್ರ ಈ ಪಿಪಿಪಿ ಮಾದರಿ ಬೇಡವೇ ಬೇಡ ಎಂದ ಪಟ್ಟಣಶೆಟ್ಟಿ ಅವರು, ಸರ್ಕಾರಿ ವೈದ್ಯಕೀಯ ಕಾಲೇಜ್‌ಗೆ ಬೇಕಾದ ಎಲ್ಲ ಸೌಕರ್ಯಗಳು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿವೆ. ಈಗಾಗಲೇ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸುವ ಕುರಿತು ಜನ ಸಾಕಷ್ಟು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೀಗಾಗಿ ಸುಮ್ಮನಿದ್ದೇನೆ. ಅನಿವಾರ್ಯವೆನ್ನಿಸಿದರೆ ಹೋರಾಟಕ್ಕೆ ಸಿದ್ಧ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net