

ಬೆಂಗಳೂರು/ವಿಜಯಪುರ: ಮೇ ಮಾಸದ ಆರಂಭದಿಂದಲೇ ಮೈದಳೆಯುವ ಗುಲ್‌ಮೊಹರ್ ಸೌಂದರ್ಯಕ್ಕೆ ಬೆರಗಾಗದವರಿಲ್ಲ. ರಸ್ತೆಗಳ ಸಾಲುಸಾಲಿನಲ್ಲಿ ಹೂವು ರಾಶಿ ಚೆಲ್ಲಿ ಸ್ವಾಗತಕೋರುವ ಮೇ ್ಲವರ್‌ನ ಚೆಂದಕ್ಕೆ ಮಾರುಹೋಗದವರಿಲ್ಲ. ಈ ಬಾರಿಯೂ ಗುಲ್‌ಮೊಹರ್ ಗ್ರಾಮಾಂತರ ಜಿಲ್ಲೆಯ ಹಾದಿ ಬೀದಿಗಳಲ್ಲಿ ನಗೆ ಚೆಲ್ಲುತ್ತಿದೆ. ಈ ಚೆಲುವಿನ ಚಿತ್ತಾರಕ್ಕೆ ಜನ ಪಿಧಾ ಆಗಿದ್ದಾರೆ.
ಗ್ರಾಮಾಂತರ ಜಿಲ್ಲೆಯ ಬಹುತೇಕ ರಸ್ತೆಗಳಲ್ಲಿ ಈಗ ಗುಲ್‌ಮೊಹರ್ ಹೂವಿನದ್ದೆ ಶೃಂಗಾರಕಾವ್ಯ. ಅರಳಿನಿಂತ ಬಣ್ಣಬಣ್ಣದ ಹೂವು ರಾಶಿ ದಾರಿಹೋಕರ ಕಣ್ಮನ ಸೆಳೆಯುತ್ತಿದೆ. ಛತ್ರಿಗಳ ರೀತಿಯಲ್ಲಿ ಕಾಣುವ ಈ ಮರಗಳಲ್ಲಿ ಅರಳಿ ನಿಂತ ಹೂವು ಸ್ವಾಗತ ಕೋರಲು ಯಾರೂ ಹೂವು ಚೆಲ್ಲಿದಂತೆ ಭಾಸವಾಗುತ್ತಿದೆ.
ವಿಜಯಪುರದಿಂದ ಶಿಡ್ಲಘಟ್ಟದ ಕಡೆಗೆ (ಬೆೆಂಗಳೂರು ಕಡೆಗೆ ಹಾದುಹೋಗುವ ರಸ್ತೆ) ಸಾಗುವ ರಸ್ತೆಯಲ್ಲಿ ಮೇ ್ಲವರ್‌ನ ರಾಶಿ ಕಣ್ಣರಳಿಸಿ ನಿಂತಿವೆ.
ಅಲಂಕಾರಿಕ ಮರ: ಇದೊಂದು ಅಲಂಕಾರಿಕ ಮರ. ಉಷ್ಣ ವಲಯದಲ್ಲಿ ಹೆಚ್ಚಾಗಿ ಬೆಳೆಯುವ ವಿಶೇಷ ಮರ. ಕನಿಷ್ಠ 15 ರಿಂದ 25 ಮೀಟರ್ ಎತ್ತರವಿರುವ ಮರಗಳ ರೆಂಬೆಕೊಂಬೆ ಸಹ ವಿಶಿಷ್ಟ. ಇದರ ಹೂವುಗಳ ಬಣ್ಣ ಸಾಮಾನ್ಯವಾಗಿ ಕಡುಗೆಂಪು, ಆಕಾಶ ನೀಲಿ, ಹಳದಿ, ತೆಳು ಕಿತ್ತಳೆ ಹೀಗೆ ತರಹೇವಾರಿ ಬಣ್ಣದ ಹೂವು ಮೈದಳೆಯುತ್ತವೆ. ಮೇ ತಿಂಗಳಲ್ಲಿ ಅರಳುವ ಹೂವುಗಳಾಗದ್ದರಿಂದ ಇವಕ್ಕೆ ಮೇ ್ಲವರ್ ಎಂಬ ಹೆಸರು ಬಂದಿದೆ.
ಹಲವು ನಾಮಗಳು: ಈ ಮರವನ್ನು ಕನ್ನಡದಲ್ಲಿ ಕತ್ತಕಾಯಿ ಮರ, ಸೀಮಸಂಕೇಶ್ವರ, ಕೆಂಪುತುರಾಯಿ, ದೊಡ್ಡರತ್ನಗಂಧಿ, ಹಿಂದಿಯಲ್ಲಿ ಗುಲ್‌ಮೊಹರ್ ಎಂದು ಕರೆಯುತ್ತಾರೆ.
ಶುಭಕಾರ್ಯಗಳಲ್ಲಿ ಪ್ರಥಮ ಸ್ಥಾನ: ಗ್ರಾಮೀಣ ಪ್ರದೇಶಗಳಲ್ಲಿ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯುವ ಸಾಂಪ್ರದಾಯಿಕ ಜಾತ್ರೆಗಳು, ಹಬ್ಬ ಹರಿದಿನಗಳಲ್ಲಿ ಈ ಹೂವಿನ ಬಳಕೆ ಹೆಚ್ಚು. ತಳಿರು ತೋರಣ, ಚಪ್ಪರಗಳಲ್ಲಿ ಈ ಹೂವು ಬಳಕೆಗೆ ಪ್ರಾಶಸ್ತ್ಯ. ಗ್ರಾಮಗಳ ಹೆಬ್ಬಾಗಿಲನ್ನು ಸಿಂಗರಿಸುವಲ್ಲಿಯೂ ಗುಲ್‌ಮೊಹರ್ ಗೆ ಪ್ರಥಮ ಸ್ಥಾನ. ಜಾತ್ರೆಗಳಲ್ಲಿ ಹೆಣ್ಣು ಮಕ್ಕಳು ತಯಾರಿಸುವ ತಂಬಿಟ್ಟಿನ ದೀಪಗಳಿಗೆ ಅಲಂಕಾರ ಹೆಚ್ಚಿಸುವುದು ಇದೇ ಹೂವು ರಾಶಿ.
ಮಕ್ಕಳಿಗೆ ಹೆಚ್ಚು ಪ್ರಿಯ: ಶಾಲಾ ಮಕ್ಕಳಿಗೆ ಏಪ್ರಿಲ್-ಮೇ ತಿಂಗಳೆಂದರೆ ಬೇಸಿಗೆ ರಜಾ ಮಜಾ. ಬಣ್ಣಬಣ್ಣದ ಹೂವು ಬಿಟ್ಟು ನಳನಳಿಸುವ ಈ ಮರಗಳ ಕೆಳಗೆ ಆಟವಾಡುವುದೆಂದರೆ ಮಕ್ಕಳಿಗೆ ಹೆಚ್ಚು ಪ್ರಿಯ. ಹೂವುಗಳನ್ನು ಹೆಕ್ಕಿ ಮಾಲೆ ಕಟ್ಟುವುದು, ಮರದ ಬುಡದಲ್ಲೇ ಪುಟ್ಟ ಪುಟ್ಟ ಗುಡಿಗಳನ್ನು ಕಟ್ಟಿ ಸಿಂಗರಿಸುವುದು, ಕೆಳಗೆ ಬಿದ್ದ ಹೂವುಗಳನ್ನು ಎತ್ತಿ ಒಬ್ಬರು ಮತ್ತೊಬ್ಬರ ಮೇಲೆ ಎಸೆಯುವುದು ಮಕ್ಕಳಿಗೆ ಅತಿ ಪ್ರಿಯವಾದ ಆಟ. ಇಂಥ ವಿಶೇಷತೆಗಳಿಂದಲೇ ಈ ಜಾತಿಯ ಹೂವು ಎಲ್ಲರಿಗೂ ಪ್ರಿಯ.