

ಸುರೇಶ್ ರಾವ್ ನೇರಂಬಳ್ಳಿ ಕುವೈಟ್
ಕರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರಲ್ಲಿ ಆತಂಕ ಉಂಟಾಗಿದೆ.
ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯರು ಮುಖ್ಯವಾಗಿ ಕರಾವಳಿ ಮಂದಿ ಅಧಿಕ ಸಂಖ್ಯೆಯಲ್ಲಿ ಉದ್ಯೋಗದಲ್ಲಿದ್ದು, ಹೊರ ರಾಷ್ಟ್ರಗಳ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ಹೊರಗೆ ಬರುವುದು ಕಷ್ಟಕರವಾಗಿದೆ.
ಕುವೈಟ್‌ನಲ್ಲಿ ಮಾರ್ಚ್ 12ರಿಂದ 2 ವಾರ ಎಲ್ಲ ಸರ್ಕಾರಿ, ಖಾಸಗಿ ಸಂಸ್ಥೆ, ಕಚೇರಿ, ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮಾರ್ಚ್ 29ರಂದು ಪುನರಾರಂಭಗೊಳ್ಳಲಿದೆ. ಮಾರ್ಚ್ 13ರಿಂದ ಮುಂದಿನ ಆದೇಶ ಬರುವವರೆಗೆ ಅನೇಕ ವಿಮಾನ ಸಂಚಾರ ರದ್ದುಗೊಳಿಸಲಾಗಿದೆ.
ಕುವೈಟ್ ನಾಗರಿಕರಿಗೆ ಮತ್ತು ಅವರ ಹತ್ತಿರದ ಸಂಬಂಧಿಗಳಿಗೆ ಮಾತ್ರ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿಲ್ಲ. ಫೆ.27 ಮತ್ತು ಅದರ ನಂತರ ಕುವೈಟ್‌ಗೆ ವಾಪಸಾಗಿರುವ ಅನಿವಾಸಿಗಳಿಗೆ ಕಡ್ಡಾಯವಾಗಿ 15 ದಿನ ಮನೆಯಲ್ಲಿ ಇರಬೇಕೆಂದು ನಿರ್ಬಂಧ ವಿಧಿಸಿದ್ದು, ಆರೋಗ್ಯ ಪ್ರಮಾಣ ಪತ್ರ ಒಪ್ಪಿಸಬೇಕೆಂದು ತಿಳಿಸಲಾಗಿದೆ. ಇಲ್ಲಿ ಕರಾವಳಿಗರು ಜಾಸ್ತಿ ಇದ್ದು, ಸಣ್ಣಸಣ್ಣ ಮಕ್ಕಳಿರುವವರು ಮತ್ತು ವಯಸ್ಕರು ಆತಂಕದಲ್ಲಿದ್ದಾರೆ.
ಒಂದು ವಾರದ ಹಿಂದೆ ಇರಾನ್‌ನಿಂದ ಬಂದ 4 ಜನಗಳಿಗೆ ಮಾತ್ರ ರೋಗ ಇತ್ತು. ಈಗ ನೂರರ ಗಡಿ ದಾಟಿದೆ. ಈಗ ಕುವೈಟ್ ನಾಗರಿಕರಿಗೆ ಸೋಂಕು ತಗುಲುತ್ತಿದೆ. ಚರ್ಚ್‌ಗಳಲ್ಲಿ ಪ್ರಾರ್ಥನೆಯನ್ನು ನಿಲ್ಲಿಸಲಾಗಿದೆ. ಮಸೀದಿಗಳಲ್ಲೂ ಪ್ರಾರ್ಥನೆ ಕಡ್ಡಾಯಗೊಳಿಸಿಲ್ಲ.
ಜನರಿಗೆ ಹೋಟೆಲ್‌ಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದ್ದು, ಸದ್ಯಕ್ಕೆ ಆಹಾರ ತಿನಿಸುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮತ್ತು ಪಾರ್ಸೆಲ್ ಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಸಾರಿಗೆ ಬಸ್‌ಗಳನ್ನೂ ಬಂದ್ ಮಾಡಲಾಗಿದ್ದು, ಅಲ್ಲಲ್ಲಿ ಕೆಲವು ಟ್ಯಾಕ್ಸಿಗಳು ಮಾತ್ರ ಓಡಾಡುತ್ತಿವೆ. ಸಿನಿಮಾ ಮಂದಿರಗಳನ್ನು ಮುಚ್ಚಲಾಗಿದೆ. ಸಾರ್ವಜನಿಕ ಸ್ಥಳಗಳಾದ ರೆಸ್ಟೋರೆಂಟ್, ಹೋಟೆಲ್, ಮಾಲ್, ಉದ್ಯಾನವನ, ಸಮುದ್ರ ತೀರಗಳಲ್ಲೂ ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಸರ್ಕಾರಿ ಮಾಲ್ಗಳು ಹಾಗೂ ಕೆಲವು ಖಾಸಗಿ ಮಾಲ್ಗಳು ಮಾತ್ರ ತೆರೆದಿದ್ದು, ಅಲ್ಲಿಯೂ ಕೂಡಾ ಜನದಟ್ಟಣೆ ಕಡಿಮೆಯಾಗಿದೆ. ಈ ನಿರ್ಬಂಧ ಪಾಲಿಸದ ಅನಿವಾಸಿಗಳಿಗೆ ಅವರವರ ದೇಶಕ್ಕೆ ವಾಪಸು ಕಳುಹಿಸಲಾಗುವುದು ಎಂಬ ಪ್ರಕಟಣೆ ಹೊರಡಿಸಲಾಗಿದೆ.
(ಲೇಖಕರು ಅನಿವಾಸಿ ಭಾರತೀಯ. ವಿಜಯವಾಣಿಗಾಗಿ ಕುವೈತ್‌ನಿಂದ ವಿಶೇಷ ವರದಿ ಮಾಡಿದ್ದಾರೆ)
ಭಾರತೀಯರಿಗೆ ತೊಂದರೆ
ಭಾರತದಿಂದ ಬರುವ ಪ್ರಯಾಣಿಕರಿಗೆ ಪ್ರತಿಬಂಧನೆ ಇದ್ದುದರಿಂದ ಮತ್ತು ವಿಮಾನ ಸಂಚಾರವಿಲ್ಲದಿರುವುದರಿಂದ ಕುವೈಟ್‌ನಿಂದ ಅನಿವಾರ್ಯ ಮತ್ತು ತುರ್ತು ಕಾರಣಗಳಿಗಾಗಿ ಸ್ವದೇಶಕ್ಕೆ ಮರಳುವವರಿಗೆ ತೊಂದರೆಯಾಗಿದೆ. ರಜೆ ಮುಂತಾದ ಕಾರಣದಿಂ ಸ್ವದೇಶಕ್ಕೆ ಹೋದವರು ಮರಳಿ ಬರಲಾಗದೆ ಪರಿತಪಿಸುವಂತಾಗಿದೆ. ಕನ್ನಡಿಗರು ಸೇರಿದಂತೆ ಹಲವಾರು ಭಾರತೀಯರು ಸಂಕಷ್ಟಕ್ಕೊಳಗಾಗಿದ್ದಾರೆ.
ಜನಸಂಚಾರ ವಿರಳ
ಎಲ್ಲ ಸರ್ಕಾರಿ, ಖಾಸಗಿ ಸಂಸ್ಥೆ, ಕಚೇರಿ, ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿರುವುದರಿಂದ ನಗರದಲ್ಲಿ ಜನಸಂಚಾರ ವಿರಳವಾಗಿದೆ. ಆರೋಗ್ಯ ಇಲಾಖೆಗೆ ಸಂಬಂಧಪಟ್ಟವರು ಮಾತ್ರ ಕೆಲಸಕ್ಕೆ ಹೋಗುತ್ತಿದ್ದಾರೆ. ಖಾಸಗಿ ಕಾರುಗಳನ್ನು ತೆಗೆದುಕೊಂಡು ಹೋಗುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಒಂದು ವೇಳೆ ಕಾರಲ್ಲಿ ಸಂಚರಿಸುವುದರಿದ್ದರೂ ಸರಿಯಾದ ಕಾರಣ ತಿಳಿಸಬೇಕು. ಹೊರಗಡೆ ಹೋಗುವಾಗ ಮಾಸ್ಕ್, ಗ್ಲೌಸ್ ಹಾಕುವುದು ಕಡ್ಡಾಯಗೊಳಿಸಲಾಗಿದೆ.