

ಗುಳೇದಗುಡ್ಡ: ನಗರದಲ್ಲಿನ ತಾಲೂಕು ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಸಾಕಷ್ಟು ಹಳೆಯದಾಗಿದ್ದು ಮಳೆಗಾಲದಲ್ಲಿ ತೀವ್ರ ಸೋರುತ್ತದೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ನಿತ್ಯ ತೊಂದರೆಯಾಗುತ್ತಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿರುವ ಗುಳೇದಗುಡ್ಡದ ಸಮುದಾಯ ಕೇಂದ್ರದ ದುಃಸ್ಥಿತಿಯನ್ನು ಯಾರೂ ಕೇಳದಂತಾಗಿದೆ. ಆಸ್ಪತ್ರೆ ಕಟ್ಟಡದಲ್ಲಿ ಎರಡು ಭಾಗಗಳಿವೆ. ಒಂದು ಕಲ್ಲಿನ ಕಟ್ಟಡ ಅಂದಾಜು 80 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು ಅದರ ಹಂಚು ಹಾಳಾಗಿ ಸೋರುತ್ತಿದೆ. ಇನ್ನೊಂದು ಅಂದಾಜು 30 ವರ್ಷಗಳ ಹಿಂದೆ ಕಟ್ಟಲಾದ 50 ಹಾಸಿಗೆಗಳ ಹೊಸ ಕಟ್ಟಡದ ಮೇಲ್ಛಾವಣಿ ಈಗ ಬಿರುಕು ಬಿಟ್ಟಿದ್ದು ಮಳೆಗಾಲದಲ್ಲಿ ಸೋರುತ್ತದೆ.
ಈ ಮೊದಲು ಜಿಲ್ಲಾ ಪಂಚಾಯಿತಿ ವತಿಯಿಂದ ಮೇಲ್ಛಾವಣಿ ದುರಸ್ತಿ ಮಾಡಿಸಲಾಗಿತ್ತು. ಈಗ ಮತ್ತೆ ಅದು ಸೋರುತ್ತಿದೆ. ಕಟ್ಟಡ ಹಳೆಯದಾಗಿದ್ದು ಎಷ್ಟು ರಿಪೇರಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗ ಹೊಸದಾಗಿ ಮಹಿಳೆಯರು ಮತ್ತು ಮಕ್ಕಳಿಗಾಗಿ 30 ಹಾಸಿಗೆಯ ಹೊಸ ಕಟ್ಟಡ ಮಂಜೂರಾಗಿದೆ. ಜಿಲ್ಲಾ ಪಂಚಾಯಿತಿಯಿಂದ ಹೊಸಕಟ್ಟಡ ನಿರ್ಮಿಸುವಾಗ ಸೋರುತ್ತಿರುವ ಕಟ್ಟಡಗಳನ್ನೂ ಸಮರ್ಪಕವಾಗಿ ದುರಸ್ತಿ ಮಾಡಬೇಕಾಗಿದೆ ಎಂದು ಗುಳೇದಗುಡ್ಡ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕುರಿ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಬೆಂಗಳೂರು ಇಂಜಿನಿಯರಿಂಗ್ ವಿಭಾಗದವರು ಸೋರುತ್ತಿರುವ ಕಟ್ಟಡ ಪರಿಶೀಲನೆ ಮಾಡಿ ಹೋಗಿದ್ದಾರೆ. ಕಟ್ಟಡ ದುರಸ್ತಿ ಮಾಡಿಸಲು ಅನುಮೋದನೆ ದೊರೆತ ಕೂಡಲೇ ಶೀಘ್ರ ಕಾಮಗಾರಿ ಮಾಡಲಾಗುವುದು.
- ಅನಂತ ದೇಸಾಯಿ, ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಬಾಗಲಕೋಟೆ
EndFragment