

ಗುಳೇದಗುಡ್ಡ: ಸರ್ಕಾರ 2018ರಲ್ಲಿ ಗುಳೇದಗುಡ್ಡವನ್ನು ನೂತನ ತಾಲೂಕು ಎಂದು ಘೋಷಿಸಿತು. ಆದರೆ ಏಳು ವರ್ಷವಾದರೂ ಇದಿನ್ನೂ ಪರಿಪೂರ್ಣವಾಗಿ ತಾಲೂಕಾಗಿ ಪರಿವರ್ತನೆಯಾಗಿಲ್ಲ.
ಇಲ್ಲಿ ಎಲ್ಲಾ ಇಲಾಖೆಯವರು ವಿವಿಧ ಇಲಾಖೆಗಳ ನಾಮಫಲಕವನ್ನು ಅಳವಡಿಸಿದ್ದಾರೆ. ಆದರೆ ಇದುವರೆಗೂ ಕಚೇರಿಗಳೇ ಆರಂಭವಾಗಿಲ್ಲ. ಇದಕ್ಕೆ ಹೊಣೆ ಯಾರು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ.
ಬೋರ್ಡ್ ನೋಡಿ ಕಚೇರಿಯಿದೆ ಎಂದು ಕೆಲವರು ಗಂಟೆಗಟ್ಟಲೇ ಹುಡುಕಾಡಿದ ಪ್ರಸಂಗಗಳು ಇಲ್ಲಿ ಸರ್ವೇ ಸಾಮಾನ್ಯ. ಏಕೆಂದರೆ ಇಲ್ಲದ ಕಚೇರಿಗೆ ಇಲಾಖೆಗಳು ನಾಮಫಲಕ ಹಾಕಿ ಜನರನ್ನು ಗೊಂದಲಕ್ಕೀಡು ಮಾಡಿವೆ. ಏಕೆಂದರೆ ಇಲ್ಲಿ ಬೋರ್ಡ್‌ಗಳಿವೆ, ಕಚೇರಿಗಳಿಲ್ಲ.....! ಇದು ಗುಳೇದಗುಡ್ಡ ತಾಲೂಕಿನ ಸ್ಪೇಶಲ್...!
ತಹಸೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ ಇಒ ಕಾರ್ಯಾಲಯ, ಸಕಾನಿ ಇಂಜಿನಿಯರರು ಹೆಸ್ಕಾಂ, ಎಂಎಲ್‌ಬಿಸಿ ಕಚೇರಿ, ಉಪ ನೋಂದಣಾಧಿಕಾರಿಗಳ ಕಚೇರಿ, ಪತ್ರಾಂಕಿತ ಉಪ ಖಜಾನಾಧಿಕಾರಿಗಳ ಕಚೇರಿ ಮಾತ್ರ ತಾಲೂಕು ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಹಾಯಕ ಕಷಿ ನಿರ್ದೇಶಕರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಭೂ ಮಾಪನ ವಿಭಾಗ, ಹಿರಿಯ ಸಹಾಯಕ ತೋಟಗಾರಿಕೆ, ಲೋಕೋಪಯೋಗಿ ಇಲಾಖೆ ವಿಭಾಗ, ಗುಳೇದಗುಡ್ಡ ವಲಯ ಅರಣ್ಯಾಧಿಕಾರಿಗಳು, ಸಾಮಾಜಿಕ ವಲಯ ಅರಣ್ಯಾಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ಸಹಾಯಕ ನಿರ್ದೇಶಕರು ಪಶು ಸಂಗೋಪನಾ ಇಲಾಖೆ, ತಾಲೂಕು ಹಿಂದುಳಿದ ವರ್ಗಗಳ ಇಲಾಖೆ, ಆರಕ್ಷಕ ವೃತ್ತ ಅಧಿಕಾರಿಗಳು, ಶಿಶು ಅಭಿವದ್ಧಿ ಅಧಿಕಾರಿಗಳು, ರೇಷ್ಮೆ ಕಷಿ ವಿಸ್ತರಣಾಧಿಕಾರಿಗಳು, ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ, ಅಬಕಾರಿ ನಿರೀಕ್ಷಕರ ಕಾರ್ಯಾಲಯ ಸೇರಿದಂತೆ ಸುಮಾರು 23 ಇಲಾಖೆಗಳ ಕಚೇರಿಗಳು ಪ್ರಾರಂಭವಾಗಬೇಕಿವೆ.
ಶಿಕ್ಷಕರು, ರೈತರು, ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಪ್ರತಿಯೊಂದು ಕೆಲಸ-ಕಾರ್ಯಗಳಿಗೂ ಬಾದಾಮಿಗೆ ಹೋಗಬೇಕು. ಹೋದರೆ ಅಧಿಕಾರಿಗಳಿಂದ ಬೇಕು, ಅಧಿಕಾರಿಗಳಿದ್ದರೂ ಕೆಲಸಗಳಾಗಬೇಕು. ಇಲ್ಲದಿದ್ದರೆ ನಿರಂತರ ಓಡಾಟ ಮಾತ್ರ ತಪ್ಪಿದ್ದಲ್ಲ. ತಾಲೂಕಿನ ಜನತೆಗೆ ಯಾಕಾದರೂ ಗುಳೇದಗುಡ್ಡ ತಾಲೂಕು ಕೇಂದ್ರವಾಗಿದೆ ಎಂದು ಹಿಡಿಶಾಪ ಹಾಕುವಂತಾಗಿದೆ.
ಶಾಸಕರು ತಕ್ಷಣ ಈ ಕಾರ್ಯಕ್ಕೆ ಮುಂದಾಗಬೇಕು. ತಾಲೂಕಿಗೆ ಎಲ್ಲ ಕಚೇರಿಗಳನ್ನು ಪ್ರಾರಂಭಿಸಬೇಕು. ಕೇವಲ ನಾಮಲಕ ಹಾಕಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದೆಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿಯಾದರೂ ಪ್ರಜಾಸೌಧ ನಿರ್ಮಾಣಕ್ಕೆ ಅನುದಾನ ನೀಡಿ, ಕಚೇರಿಗಳನ್ನು ಸ್ಥಾಪಿಸಬೇಕಿದೆ.
ಗುಳೇದಗುಡ್ಡ ತಾಲೂಕು ಮಂಜೂರಾದರೂ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಎರಡು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿ ಕಚೇರಿಗೆ ಹಣ ಒದಗಿಸಲು ಸಾಧ್ಯವಾಗದಿದ್ದರೆ, ಹೊಸ ತಾಲೂಕುಗಳನ್ನೇ ರದ್ದುಪಡಿಸಿಬಿಡಿ ಎಂದು ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿತ್ತು. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ವರ್ಷದ ಬಜೆಟ್‌ನಲ್ಲಿ ಕಚೇರಿಗಳ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು. -ಅಶೋಕ ಹೆಗಡೆ, ತಾಲೂಕು ಹೋರಾಟ ಸಮಿತಿ, ಗುಳೇದಗುಡ್ಡ ಗುಳೇದಗುಡ್ಡ ತಾಲೂಕಿಗೆ ನಮ್ಮ ಹಳ್ಳಿ ಸೇರಿಸಿದ್ದಾರೆ. ಆದರೆ ಕೆಲಸಗಳು ಮಾತ್ರ ಇನ್ನೂ ಬಾದಾಮಿ ತಾಲೂಕಿನಲ್ಲಿಯೇ ನಡೆಯುತ್ತವೆ. ಇಂತಹ ಗೊಂದಲ ನಮಗೆ ಬೇಡ, ಗುಳೇದಗುಡ್ಡ ತಾಲೂಕಿನಲ್ಲಿ ಆದಷ್ಟು ಬೇಗ ಕಚೇರಿಗಳು ಪ್ರಾರಂಭವಾಗಬೇಕು. -ಶರಣಪ್ಪ ಗೊರವರ, ಕಟಗಿನಹಳ್ಳಿ ಗ್ರಾಮಸ್ಥ