ಹೈ ವೋಲ್ಟೇಜ್ ಗುಲ್ಬರ್ಗ ಕ್ಷೇತ್ರದಲ್ಲಿ ಮತ ಎಣಿಕೆಗೆ ಕ್ಷಣಗಣನೆ

IMG-20240604-WA0008
Published on

ಕಲಬುರಗಿ: ಗುಲಬರ್ಗಾ ಲೋಕಸಭೆಯ ಮತ ಎಣಿಕೆ ನಗರದ ಹೊರವಲಯದ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬೆಳಗ್ಗೆ 6ಗಂಟೆಗೆ ಸ್ಟ್ರಾಂಗ್ ರೂಂ ಒಪನ್ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ, ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್.ಮಧ್ಯೆ ನೇರ ಹಣಾಹಣಿ ಇದ್ದು, ಕುತೂಹಲಕ್ಕೆ ಕೆಲವೇ ಗಂಟೆಯಲ್ಲಿ ತೆರೆ ಬೀಳಲಿದೆ.

ಚುನಾವಣಾಧಿಕಾರಿ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಸಾಮಾನ್ಯ ವೀಕ್ಷಕ ದೀನಪಕರ್ ಸಿನ್ಹಾ ಮತ್ತು ಎಲ್ಲ ಅಭ್ಯರ್ಥಿಗಳ ಎದುರಿನಲ್ಲಿ ಸ್ಟ್ರಾಂಗ್ ರೂಂ ಒಪನ್ ಮಾಡಲಾಯಿತು.

ಬೆಳಗ್ಗೆ 8 ಗಂಟೆಗೆ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ಪ್ರಾರಂಭವಾಗಲಿದೆ. ಬೆಳಗ್ಗೆ 6 ಗಂಟೆಯಿಂದಲೆ ಸ್ಟ್ರಾಂಗ್ ತೆರೆಯುವ ಕಾರ್ಯ ನಡೆಯಲಿದ್ದು, ಎಲ್ಲ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಗುಲಬರ್ಗಾ ವಿ.ವಿ.ಯ ಗಣಿತ ವಿಭಾಗದ ಭಾಸ್ಕರ್ ಹಾಲ್‍ನಲ್ಲಿ ಅಫಜಲಪೂರ, ಪರೀಕ್ಷಾ ಕೇಂದ್ರದಲ್ಲಿ ಚಿತ್ತಾಪುರ, ಗುಲಬರ್ಗಾ ಗ್ರಾಮೀಣ ಹಾಗೂ ಪರೀಕ್ಷಾ ಕೇಂದ್ರದ ಸೆಲುಲಾರ್ ಹಾಲ್‍ನಲ್ಲಿ ಜೇವರ್ಗಿ, ಇಂಡೋರ್ ಸ್ಟೇಡಿಯಂನಲ್ಲಿ ಗುರುಮಠಕಲ್ ಮತ್ತು ಗುಲಬರ್ಗಾ ಉತ್ತರ, ಕನ್ನಡ ವಿಭಾಗದ ಹರಿಹರ ಸಭಾಂಗಣದಲ್ಲಿ ಸೇಡಂ ಹಾಗೂ ಸಸ್ಯಶಾಸ್ತ್ರ ವಿಭಾಗದ ಬೋಸ್ ಸಭಾಂಗಣದಲ್ಲಿ ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಪರೀಕ್ಷಾಂಗ ಕಟ್ಟಡದಲ್ಲಿ ಜೇವರ್ಗಿ ಮತ ಕ್ಷೇತ್ರ ಎಣಿಕೆ ಕೇಂದ್ರ ಪಕ್ಕದಲ್ಲಿಯೇ ಪೋಸ್ಟಲ್ ಬ್ಯಾಲೆಟ್ ಮತಪತ್ರಗಳ ಎಣಿಕೆ ಕಾರ್ಯ ಪ್ರತ್ಯೇಕವಾಗಿ ನಡೆಯಲಿದೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 14 ಟೇಬಲ್‍ಗಳನ್ನು ಮತ ಎಣಿಕೆಗೆ ಹಾಕಲಾಗಿದೆ. ಪ್ರತಿ ಟೇಬಲ್‍ಗೆ ಓರ್ವ ಎಣಿಕೆ ಮೇಲ್ವಿಚಾರಕರು, ಓರ್ವ ಎಣಿಕೆ ಸಹಾಯಕರು, ಓರ್ವ ಮೈಕ್ರೋ ವೀಕ್ಷಕರು ಹಾಗೂ ಓರ್ವ ಗ್ರೂಪ್ ‘ಡಿ’ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪ್ರತಿ ವಿಧಾನಸಭಾವಾರು ತಲಾ 18 ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು, ಮೈಕ್ರೋ ವೀಕ್ಷಕರು, ಗ್ರೂಪ್ ‘ಡಿ’ ಸಿಬ್ಬಂದಿ ಹಾಗೂ ಇತರೆ 40-50 ಸಿಬ್ಬಂದಿ ಇರಲಿದ್ದಾರೆ. ಅಧಿಕಾರಿಗಳು, ಅಭ್ಯರ್ಥಿಗಳು, ಕೌಂಟಿಂಗ್ ಏಜೆಂಟ್ ಆಗಮನಕ್ಕೆ ಪ್ರತ್ಯೇಕ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.

ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಕ್ಷಣ-ಕ್ಷಣದ ಮಾಹಿತಿ ಸಿ.ಇ.ಓ. ಕಚೇರಿ ವಮತ್ತು ಮಾಧ್ಯಮದವರಿಗೆ ನೀಡಲು ಹೈಸ್ಪೀಡ್ ಇಂಟರ್ನೆಟ್ ಸೇವೆ ಪಡೆಯಲಾಗಿದೆ.

ಕೌಂಟಿಂಗ್ ಏಜೆಂಟ್‍ಗಳು ಪೆನ್, ಸಿಂಪಲ್ ಕ್ಯಾಲ್ಕುಲೇಟರ್ ಹಾಗೂ ಪೇಪರ್ ಮಾತ್ರ ತರಲು ಅವಕಾಶ ನೀಡಿದ್ದು, ಮೋಬೈಲ್ ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ವಿವಿಧ ರೀತಿಯ ತಂಬಾಕು, ಗುಟಕಾ, ಬೀಡಿ, ಸಿಗರೇಟ್, ಬೆಂಕಿ ಪೊಟ್ಟಣ, ಲೈಟರ್ ಹಾಗೂ ಮದ್ಯಪಾನಗ ಮತ ಎಣಿಕೆ ತರುವಂತಿಲ್ಲ.

ಗುಲಬರ್ಗಾ ವಿ.ವಿ.ಯ ವಿವಿಧ ಕಟ್ಟಡದಲ್ಲಿ ಮತ ಎಣಿಕೆ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ನಡೆಯುವ ಎಲ್ಲಾ ಕಡೆ ಸುಮಾರು 700 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net