

ಮಂಗಳೂರು: 1800 ವರ್ಷಗಳಷ್ಟು ಪುರಾತನ ಮತ್ತು ಮಂಗಳೂರು ನಗರ ವ್ಯಾಪ್ತಿಯ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಗುಜ್ಜರಕೆರೆ ಕೊನೆಗೂ ಅಭಿವೃದ್ಧಿ ಕಾಣುತ್ತಿದೆ. ಪ್ರಸ್ತುತ ಕೆರೆಯಲ್ಲಿ ತುಂಬಿರುವ ಹೂಳು ಡ್ರೆಜ್ಜಿಂಗ್ ಮಾಡಿ ತೆರವುಗೊಳಿಸುವ ಕೆಲಸಗಳು ಸಾಗಿವೆ.
ಸುಮಾರು 3.43 ಎಕರೆ ವಿಸ್ತೀರ್ಣ ಹೊಂದಿರುವ ಧಾರ್ಮಿಕ ಹಿನ್ನೆಲೆಯಿರುವ ಗುಜ್ಜರಕೆರೆ ಹಲವು ದಶಕಗಳಿಂದ ಅಜೀರ್ಣಾವಸ್ಥೆಯಲ್ಲಿತ್ತು. ಸ್ಥಳೀಯಾಡಳಿತ ಕೆರೆ ಅಭಿವೃದ್ಧಿಗೆ ಸಾಕಷ್ಟು ಬಾರಿ ಹಣ ಮೀಸಲಿಟ್ಟರೂ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆಲಸ ಸರಿಯಾಗಿ ನಡೆದಿರಲಿಲ್ಲ. ಈಗ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ 4 ಕೋಟಿ ರೂ. ವೆಚ್ಚದಲ್ಲಿ ಗುಜ್ಜರಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಅದರಂತೆ ಕೆಲಸ ಆರಂಭವಾಗಿದೆ. ಕೆರೆಯಲ್ಲಿ ಅಂತರ್ಜಲ ಹೆಚ್ಚಳ ಉದ್ದೇಶ ಮತ್ತು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದು ಕಾಮಗಾರಿ ಉದ್ದೇಶ.
20 ಅಡಿ ಹೂಳು ತೆರವು
ಕೆರೆಯಲ್ಲಿ ಹೂಳು ತೆರವುಗೊಳಿಸದ ಕಾರಣ ಹಲವು ಅಡಿಗಳಷ್ಟು ಹೂಳು ತುಂಬಿದೆ. ಪ್ರಸ್ತುತ ಸುಮಾರು 15 ಅಡಿ ಆಳದವರೆಗೆ ಹೂಳು ತೆಗೆಯಲಾಗುತ್ತಿದೆ. ಆದರೆ ಕೆರೆ ದಡದಿಂದ 6 ಅಡಿ ಬಿಟ್ಟು ಹೂಳು ತೆಗೆಯಲಾಗುತ್ತಿದೆ. ಇದರಿಂದ ಕೆರೆಯಲ್ಲಿ ಮತ್ತೆ ಹೂಳು ತುಂಬುವ ಸಾಧ್ಯತೆಯಿದೆ ಎಂದು ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಅಭಿವೃದ್ಧಿ ಯಾವ ರೀತಿ?
ಈ ಹಿಂದೆ ಕೆರೆ ಸೇರುತ್ತಿದ್ದ ಒಳಚರಂಡಿ ನೀರಿನ ಮೂಲಗಳನ್ನು ಸರಿಪಡಿಸಲಾಗಿದ್ದು, ಪ್ರಸ್ತುತ ಕೊಳಚೆ ನೀರು ಕೆರೆ ಸೇರುತ್ತಿಲ್ಲ. ಕೆರೆಯ ಸುತ್ತಲೂ ಕಲ್ಲಿನ ಕಟ್ಟೆ ದುರಸ್ತಿ ಕೆಲಸವೂ ಪ್ರಗತಿಯಲ್ಲಿದೆ. ದಡದಲ್ಲಿರುವ ಮರಗಳನ್ನು ಹಾಗೇ ಉಳಿಸಿ, ಹುಲ್ಲುಹಾಸು, ಕುಳಿತುಕೊಳ್ಳಲು ಬೆಂಚುಗಳ ಅಳವಡಿಕೆ, ಕೆರೆ ಸುತ್ತಲೂ ಇರುವ ರಸ್ತೆಗಳ ಅಭಿವೃದ್ಧಿ, ಒಂದು ಭಾಗದಲ್ಲಿ ಓಪನ್ ಜಿಮ್, ವಾಕಿಂಗ್ ಟ್ರಾೃಕ್, ಎರಡು ಕಡೆ ನೀರಿಗೆ ಇಳಿಯಲು ಮೆಟ್ಟಿಲು, ವಾಹನ ಪಾರ್ಕಿಂಗ್‌ಗೆ ಸ್ಥಳಾವಕಾಶ ಜತೆಗೆ ಶೌಚಗೃಹವೂ ನಿರ್ಮಾಣವಾಗಲಿದೆ. ಮೇ ಅಂತ್ಯದೊಳಗೆ ಎಲ್ಲ ಕಾಮಗಾರಿ ಮುಗಿಸಲು ಉದ್ದೇಶಿಸಲಾಗಿದೆ.
ಗುಜ್ಜರ ಕೆರೆ ಹೂಳು ತೆಗೆಯುವ ಕೆಲಸ ಪ್ರಗತಿಯಲ್ಲಿದ್ದು, 10 ದಿನದಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ಕೆರೆಗೆ ಮೆಟ್ಟಿಲುಗಳ ನಿರ್ಮಾಣ ಕೆಲಸ ನಡೆಯುತ್ತಿದೆ. ಮಳೆ ಸಂಪೂರ್ಣ ಕಡಿಮೆಯಾದ ಬಳಿಕ ಸುತ್ತಲೂ ವಾಕಿಂಗ್ ಟ್ರಾೃಕ್, ಬೆಂಚು ಅಳವಡಿಕೆ, ಗಾರ್ಡನ್ ನಿರ್ಮಾಣ ಕಾರ್ಯ ನಡೆಯಲಿದೆ.
ಮೊಹಮ್ಮದ್ ನಜೀರ್, ಎಂಡಿ, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್
ಶಾಸಕ ವೇದವ್ಯಾಸ್ ಕಾಮತ್ ವಿಶೇಷ ಮುತುವರ್ಜಿ ವಹಿಸಿ ಕಾಮಗಾರಿ ನಡೆಸುತ್ತಿದ್ದಾರೆ. ಪ್ರಸ್ತುತ ಹೂಳು ತೆಗೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. 20 ಮೀ. ಆಳದಿಂದ ಹೂಳು ತೆಗೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೆರೆ ದಂಡೆಯಿಂದ 6 ಅಡಿಗಳಷ್ಟು ಬಿಟ್ಟು ತೆಗೆಯುತ್ತಿದ್ದಾರೆ. ಇದರಿಂದ ಹೂಳು ಮತ್ತೆ ತುಂಬುವ ಸಾಧ್ಯತೆಯಿದೆ.
ನೇಮು ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ, ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ