ರಾಜ್ಯದಲ್ಲೂ ಗುಜರಾತ್ ಮಾದರಿ ಗೆಲುವು; ಈಶ್ವರಪ್ಪ ವಿಶ್ವಾಸ

Kse
Published on

ಶಿವಮೊಗ್ಗ: ಗುಜರಾತ್ ಮಾದರಿಯಲ್ಲೇ ರಾಜ್ಯದಲ್ಲೂ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಲಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಗುಜರಾತ್ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ರಾಜ್ಯ ಸಾಕಷ್ಟು ಅಭಿವೃದ್ಧಿಯಾಗಿದೆ. ಅಲ್ಲಿಗೆ ಹೋಗಿ ನೋಡಿದಾಗ ಅಭಿವೃದ್ಧಿ ಬಗ್ಗೆ ತಿಳಿಯಲಿದೆ. ಗುಜರಾತ್ ಇಡೀ ದೇಶಕ್ಕೆ ಮಾದರಿಯಾಗಿದ್ದು ಅದೇ ರೀತಿಯಲ್ಲಿ ನಾವು ನಮ್ಮ ರಾಜ್ಯದಲ್ಲೂ ಅಭಿವೃದ್ಧಿ ಮಾಡಿದ್ದೇವೆ ಎಂದರು.

ಗುಜರಾತ್‌ನಲ್ಲಿ ಪೇಜ್ ಪ್ರಮುಖ ರಚನೆ ಯಶಸ್ವಿಯಾಗಿದೆ. ನಮ್ಮ ರಾಜ್ಯದಲ್ಲೂ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಪೇಜ್ ಪ್ರಮುಖ ರಚಿಸಿದ್ದು ಈ ಬಾರಿ ಪೂರ್ಣ ಬಹುಮತ ಬರಲಿದೆ. ಗುಜರಾತ್ ಫಲಿತಾಂಶ ಇಡೀ ದೇಶಕ್ಕೆ ಸಂತೋಷ ತಂದಿದೆ. 2024ರಲ್ಲಿ ಲೋಕಸಭಾ ಚುನಾವಣೆಗೆ ಸಜ್ಜಾಗಿದ್ದು ಅಲ್ಲಿಯೂ ಗೆಲುವು ಸಾಧಿಸಲು ಈ ಫಲಿತಾಂಶ ದಿಕ್ಸೂಚಿ ಆಗಲಿದೆ ಎಂದರು.

ಅಧಿಕಾರಕ್ಕಾಗಿ ಕಾಂಗ್ರೆಸ್ ಮುಖಂಡರು ಜಗಳ ಆಡುತ್ತಿದ್ದಾರೆ. ಗುಜರಾತ್‌ನಲ್ಲಿ 15 ಸೀಟು ಗೆಲುವು ಸಾಧಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ತಮ್ಮ ಮೇಲೆ ಸೋಲಿನ ಅಪಾದನೆ ಬಾರದಿರಲೆಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರಿಂದಲೇ ಕಾಂಗ್ರೆಸ್ ಸೋತಿದೆ ಎಂದು ಆರೋಪ ಹೊರಿಸುತ್ತಾರೆ. ಆಮ್ ಆದ್ಮಿ ಪಕ್ಷ ನಾಲ್ಕು ಸ್ಥಾನಗಳನ್ನು ಗೆದ್ದಿದೆ. ಅಪ್‌ಗೂ ಹೆಚ್ಚು ಸೀಟು ಬಂದಿಲ್ಲ. ದೆಹಲಿ ಬಿಟ್ಟರೆ ಬೇರೆಲ್ಲೂ ಅವರಿಗೆ ಅಧಿಕಾರ ಸಿಕ್ಕಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net