

ಮೈಸೂರು: ನಗರದ ಬನ್ನಿಮಂಟಪದ ಬಳಿಯ ಸಿ.ವಿ.ರಸ್ತೆಯಲ್ಲಿರುವ ಗುಜರಿಯಲ್ಲಿ ಆಕಸ್ಮಿಕವಾಗಿ ಬೆಂಕಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಸುಟ್ಟು ಭಸ್ಮವಾಗಿದೆ.
ಗುಜರಿಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಬಿದ್ದಿದ್ದರಿಂದ ಇಡೀ ಪ್ರದೇಶ ವ್ಯಾಪ್ತಿಯಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ಸೋಮವಾರ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸತತ 6 ಗಂಟೆಗಳ ಕಾಲ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಸುಮಾರು 15 ಗುಂಟೆ ಪ್ರದೇಶದಲ್ಲಿ ಗುಜರಿಯಲ್ಲಿ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ವಸ್ತುಗಳ ರಾಶಿಗೆ ಬೆಳಗ್ಗೆ 11 ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಿಧಾನವಾಗಿ ಎಲ್ಲೆಡೆ ವ್ಯಾಪಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಸರಸ್ವತಿಪುರಂ, ಬನ್ನಿಮಂಟಪ, ಹೆಬ್ಬಾಳು ಅಗ್ನಿಶಾಮಕ ಠಾಣೆಯ ವಾಹನಗಳು ಅಲ್ಲದೇ ಶ್ರೀರಂಗಪಟ್ಟಣ, ಮಂಡ್ಯದ ಅಗ್ನಿಶಾಮಕ ಠಾಣೆಯ ಐದು ವಾಹನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಮುಖ್ಯ ಅಗ್ನಿಶಾಮಕಾಧಿಕಾರಿ ಜಯರಾಮಯ್ಯ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು.
ಸೋಮಶೇಖರ್ ಎಂಬುವರಿಗೆ ಸೇರಿದ ಜಾಗದಲ್ಲಿ ಸಿರಾಜ್ ಸಲೀಂ ಅವರು ಗುಜರಿ ಇಟ್ಟುಕೊಂಡಿದ್ದರು. ಆಕಸ್ಮಿಕವಾಗಿ ಬೆಂಕಿಯಿಂದ ಅನಾಹುತ ಸಂಭವಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಎನ್.ಆರ್. ಠಾಣೆ ಪೊಲೀಸರು ತಿಳಿಸಿದ್ದಾರೆ.