

ಲಿಂಗಸುಗೂರು: ಚಿತ್ತಾಪುರ ಗ್ರಾಮಸ್ಥರು ಕಲುಷಿತ ನೀರು ಸೇವಿಸಿ ವಾಂತಿ-ಭೇದಿ ಕಾರಣಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಕಲುಷಿತ ನೀರು ಪೂರೈಕೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಹಾಯಕ ಆಯುಕ್ತ ಅವಿನಾಶ ಶಿಂಧೆಗೆ ಕರುನಾಡ ವಿಜಯ ಸೇನೆಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಕಳೆದ ಭಾನುವಾರದಿಂದ ಗ್ರಾಮದಲ್ಲಿ ವಾಂತಿ-ಭೇದಿ ಕಾರಣಕ್ಕೆ 60 ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ತಿಪ್ಪೆಗುಂಡಿ ಮತ್ತು ಚರಂಡಿ ಮಧ್ಯೆ ಪೈಪ್‌ಲೈನ್ ಹಾದು ಹೋಗಿದ್ದು, ಅದರಲ್ಲಿ ಕಲುಷಿತ ನೀರು ಮಿಶ್ರಣಗೊಳ್ಳುತ್ತಿರುವುದು ವಾಂತಿ-ಭೇದಿಗೆ ಕಾರಣವಾಗಿದೆ.
ಅಸ್ವಸ್ಥರ ತುರ್ತು ಚಿಕಿತ್ಸೆಗೆ ತಾಲೂಕು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿದ್ದಾರೆ. ಆದರೆ, ಅವಘಡಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಗ್ರಾಮದಲ್ಲಿ ಕೂಡಲೇ ಪೈಪ್‌ಲೈನ್ ಬದಲಾಯಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಲಾಯಿತು.