

ಚನ್ನಮ್ಮಕಿತ್ತೂರು: ವೈದ್ಯೆಗೆ ಜೀವ ಬೆದರಿಕೆ ಹಾಕಿದ ಘಟನೆ ಖಂಡಿಸಿ ಹಾಗೂ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಚನ್ನಮ್ಮ ಕಿತ್ತೂರು ತಾಲೂಕು ಘಟಕದಿಂದ ಶಾಸಕ ಮಹಾಂತೇಶ ದೊಡಗೌಡರ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಕಿತ್ತೂರಿನ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸ್ತ್ರಿರೋಗ ತಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಅನ್ನಪೂರ್ಣಾ ಅಂಗಡಿ ಅವರಿಗೆ ಅಬ್ದುಲ್ ಮುಜಾವರ್ ತನ್ನ ಸಂಗಡಿಗರೊಂದಿಗೆ ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ.
ಶೀಘ್ರ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು. ನೌಕರರ ಸಂಘದ ಅಧ್ಯಕ್ಷ ಈರಣ್ಣ ಚಿನ್ನಣ್ಣವರ, ಎಂ.ಎಸ್. ಕಲ್ಮಠ, ರವೀಂದ್ರ ಜಾಧವ, ಕೆ.ಜಿ. ಗಡಾದ ಇತರರು ಇದ್ದರು.
ಘಟನೆ ಕುರಿತು ಚರ್ಚಿಸಲು ಸಭೆ ಇಂದು: ಮಹಿಳಾ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿ ಕೆಲಸಕ್ಕೆ ಅಡ್ಡಿಪಡಿಸಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ. ಘಟನೆಯಿಂದ ನೊಂದಿರುವ ವೈದ್ಯೆ ಅನ್ನಪೂರ್ಣಾಗೆ ಅಗತ್ಯ ಭದ್ರತೆ ನೀಡುವ ಭರವಸೆ ನೀಡಲಾಗಿದೆ. ಅಲ್ಲದೆ, ಘಟನೆ ಸಂಬಂಧ ಚರ್ಚಿಸಲು ಮೇ 14ರಂದು ಅಧಿಕಾರಿಗಳ ಸಭೆ ಆಯೋಜಿಸಲಾಗಿದೆ ಎಂದು ಶಾಸಕ ಮಹಾಂತೇಶ ದೊಡಗೌಡರ ತಿಳಿಸಿದ್ದಾರೆ.