

ಬೆಳಗಾವಿ: ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ನಡುವಿನ ಕಿತ್ತಾಟ, ವಸತಿ ನಿಲಯಗಳ ಬಿಲ್ ಬಾಕಿ ಉಳಿಸಿಕೊಂಡಿರುವ ಕುರಿತು ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ತಿಂಗಳಿನಿಂದ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅಧಿಕಾರಿಗಳ ನಡುವೆ ಕಿತ್ತಾಟ ನಡೆಯುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ತನಿಖೆ ನಡೆಸಲು ಸೂಚಿಸಿದ್ದೇನೆ. ಅಲ್ಲದೆ, ಇಲಾಖೆಯ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳ ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ. ಯಾರು ಏನೇನು ಮಾಡುತ್ತಿದ್ದಾರೆ ಎಂಬು ವುದು ಗಮನಕ್ಕೆ ಬಂದಿದೆ ಎಂದರು.
ಹಿಂದುಳಿದ ಇಲಾಖೆ ಯ ವ್ಯಾಪ್ತಿಯ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ವಸತಿ ನಿಲಯಗಳಲ್ಲಿನ ವಾರ್ಡ್ ನಗಳು ಸೇರಿ ಕೆಳ ಹಂತದ ನೌಕರರಿಗೆ ನಿರಂತರ ಕಿರುಕುಳ ನೀಡುತ್ತಿರುವ ಕುರಿತು ದೂರುಗಳು ಬಂದಿವೆ. ವಿದ್ಯುತ್ ಬಿಲ್ ಪಾವತಿಸದಿರುವ ಹಿನ್ನೆಲೆ ವಸತಿ ನಿಲಯಗಳಿಗೆ ವಿದ್ಯುತ್ ಕಡಿತಗೊಂಡಿರುವುದು, ಬಿಲ್‌ಗಳನ್ನು ಪಾಸ್ ಮಾಡಲು ಕಮಿಷನ್‌ಗಾಗಿ ಅಧಿಕಾರಿಗಳು ನಡುವೆ ಕಿತ್ತಾಟ ನಡೆಯುತ್ತಿರುವ ಕುರಿತು ದೂರು ಬಂದಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿಯೇ ತನಿಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಬೆಳಗಾವಿ ತಹಸೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಏನು ಹೇಳಲು ಸಾಧ್ಯವಿಲ್ಲ. ಆತ್ಮಹತ್ಯೆ ಪ್ರಕರಣದ ತನಿಖಾ ವರದಿ ಬಂದ ನಂತರವೇ ಏನು ಕ್ರಮ ಕೈಗೊಳ್ಳಬೇಕೆಂಬ ನಿರ್ಧಾರ ಮಾಡಬೇಕಾಗುತ್ತದೆ. ಪ್ರಕರಣ ಈಗಾಗಲೇ ತನಿಖಾ ಹಂತದಲ್ಲಿರುವುದರಿಂದ ಈಗಲೇ ಏನು ಹೇಳಲು ಆಗುವುದಿಲ್ಲ ಎಂದರು.
ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ 105 ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದೇವೆ. ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. | ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ