

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವರ್ಗಾವಣೆ ಪರ್ವ ಆರಂಭಗೊಂಡ ಬೆನ್ನಲ್ಲೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ಸಾಮಾನ್ಯ ವರ್ಗಾವಣೆಯ ಮಾರ್ಗಸೂಚಿಯನ್ನು ಹೊರಡಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಲ ವೃಂದಗಳ ಅಧಿಕಾರಿ/ಸಿಬ್ಬಂದಿಗಳ ವರ್ಗಾವಣೆಗೆ ವಿಸ್ತೃತವಾದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಬಿಬಿಎಂಪಿಗೆಂದೇ ಪ್ರತ್ಯೇಕ ವರ್ಗಾವಣೆ ಮಾರ್ಗಸೂಚಿ ರಚಿಸಲು ಸರ್ಕಾರ ಅನುಮೋದನೆ ನೀಡಿದ್ದು, 2024-25ನೇ ಸಾಲಿನಿಂದ ಜಾರಿಗೆ ಬರಲಿದೆ. ಇದರಿಂದಾಗಿ ಒಂದೇ ಕಡೆ ಹಲವು ವರ್ಷಗಳಿಂದ ಬೀಡುಬಿಟ್ಟಿದ್ದ ನೌಕರನ್ನು ಬೇರೆಡೆಗೆ ನಿಯೋಜಿಸಿ ಆಡಳಿತವನ್ನು ಮತ್ತಷ್ಟು ಚುರುಕುಗೊಳಿಸಲು ಸಾಧ್ಯವಾಗಲಿದೆ. ಮುಖ್ಯವಾಗಿ ಕೆಲಸ ಮಾಡದೆ ಒಂದೇ ಕಡೆ ಸೇವೆ ಸಲ್ಲಿಸುತ್ತಿದ್ದರೂ, ನಾಗರಿಕರ ಕೆಲಸ-ಕಾರ್ಯವನ್ನು ಮಾಡಿಕೊಡದ ಅಧಿಕಾರಿ/ಸಿಬ್ಬಂದಿಗಳನ್ನು ಮುಲಾಜಿಲ್ಲದೆ ಎತ್ತಂಗಡಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ನಿಯಮ ಮೀರಿ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿಯಲು ರಾಜಕೀಯ ಒತ್ತಡ ತರವುದನ್ನು ನಿಷೇಧಿಸಿದ್ದು, ಅಂತಹ ನೌಕರರನ್ನು ಕೋರಿದ ಸ್ಥಳಕ್ಕೆ ವರ್ಗಾವಣೆಗೆ ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಒಂದೇ ಹುದ್ದೆಯಲ್ಲಿ ಒಂದು ಸ್ಥಳ/ಕಚೇರಿಯಲ್ಲಿ 2 ವರ್ಷ ಮೀರಿ ಕಾರ್ಯನಿರ್ವಹಿಸಿದ್ದಲ್ಲಿ ಅಂತಹ ಅಧಿಕಾರಿ ವರ್ಗಾವಣೆಗೆ ಅರ್ಹರು. ಗ್ರೂಪ್-ಸಿ ಕಾರ್ಯನಿರ್ವಾಹಕ ಸಿಬ್ಬಂದಿಗೆ 3 ವರ್ಷ ಹಾಗೂ ಗ್ರೂಪ್-ಡಿ ಸಿಬ್ಬಂದಿಗೆ 7 ವರ್ಷ ನಿಗದಿ ಮಾಡಲಾಗಿದೆ. ವರ್ಗಾವಣೆಗೆ ಅರ್ಹರುಳ್ಳ ನೌಕರರನ್ನು ಹಾಲಿ ಕೆಲಸ ಮಾಡುತ್ತಿರುವ ವಿಭಾಗದಿಂದ ಬೇರೆ ವಿಭಾಗಕ್ಕೆ ಕಡ್ಡಾಯವಾಗಿ ವರ್ಗಾಯಿಸಲಾಗುತ್ತದೆ. ಒಂದೇ ಸ್ಥಳದಲ್ಲಿ 10 ವರ್ಷ ಮೀರಿದ್ದಲ್ಲಿ ಕಡ್ಡಾಯವಾಗಿ ಬೇರೆ ವಲಯಕ್ಕೆ ವರ್ಗಾವಣೆ ಮಾಡಲಾಗುತ್ತದೆ. ವರ್ಗಾವಣೆಗೆ ಸೇವೆ ಸಲ್ಲಿಸಿದ ಅವಧಿಯನ್ನು ಪರಿಗಣಿಸಿ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಖಾಲಿ ಹುದ್ದೆಗಳನ್ನು ವರ್ಗಾವಣೆಗೆ ಪರಿಗಣಿಸಬಾರದು ಎಂದು ಆದೇಶದಲ್ಲಿ ನಮೂದಿಸಲಾಗಿದೆ.
ಮೂವರಿಗೆ ವರ್ಗಾವಣೆ ಹೊಣೆ:
ಪಾಲಿಕೆಯ 8 ವಲಯಗಳ ಜತೆ ಕೇಂದ್ರ ಕಚೇರಿ ಆವರಣದಲ್ಲಿರುವ ಆಫೀಸುಗಳನ್ನು ಒಟ್ಟಾಗಿ ಪ್ರತ್ಯೇಕ ಒಂದು ವಲಯವನ್ನಾಗಿ ಪರಿಗಣಿಸಲಾಗುತ್ತದೆ. ಇದರಿಂದಾಗಿ ಕೇಂದ್ರ ಕಚೇರಿಯಲ್ಲಿ ಪ್ರಭಾವಿ ಸ್ಥಾನದಲ್ಲಿರುವವರೂ ನಿಯಮಾನುಸಾರ ವರ್ಗಾವಣೆಗೆ ಒಳಗಾಗಲಿದ್ದಾರೆ. ಮುಖ್ಯವಾಗಿ ಗ್ರೂಪ್-ಎ ವೃಂದದ ಅಧಿಕಾರಿಗಳ ವರ್ಗಾವಣೆ/ನಿಯೋಜನೆ/ನೇಮಕಾತಿ ನಿರ್ಧಾರವನ್ನು ನಗರಾಭಿವೃದ್ಧಿ ಇಲಾಖೆಗೆ ಅಧಿಕಾರ ನೀಡಲಾಗಿದೆ. ಗ್ರೂಪ್-ಬಿ ಹಾಗೂ ಗ್ರೂಪ್-ಸಿ ಮುಖ್ಯ ಆಯುಕ್ತರು ಮತ್ತುಗ್ರೂಪ್-ಡಿ ನೌಕರರಿಗೆ ಸಂಬಂಧಿಸಿದಂತೆ ಪಾಲಿಕೆಯ ಆಡಳಿತ ವಿಭಾಗದ ವಿಶೇಷ ಆಯುಕ್ತರಿಗೆ ವಹಿಸಲಾಗಿದೆ.
ಒಂದು ಸ್ಥಳದಲ್ಲಿರಬಹುದಾದ ಕನಿಷ್ಠ ಅವಧಿ ವಿವರ:
ಸಿಬ್ಬಂದಿ/ಅಧಿಕಾರಿ ವೃಂದ ಸೇವಾವಧಿ
ಗ್ರೂಪ್-ಎ ಅಧಿಕಾರಿ 2 ವರ್ಷ
ಗ್ರೂಪ್-ಬಿ ಅಧಿಕಾರಿ/ಸಿಬ್ಬಂದಿ 2 ವರ್ಷ
ಗ್ರೂಪ್-ಸಿ ಸಿಬ್ಬಂದಿ (ಕಾರ್ಯನಿರ್ವಾಹಕ) 3 ವರ್ಷ
ಗ್ರೂಪ್-ಸಿ ಸಿಬ್ಬಂದಿ (ಲಿಪಿಕ) ಸರ್ಕಾರಿ ಆದೇಶ
ಗ್ರೂಪ್-ಡಿ ಸಿಬ್ಬಂದಿ 7 ವರ್ಷ
ವೃಂದವಾರು ಹುದ್ದೆಗಳ ವಿವರ:
ಗ್ರೂಪ್-ಎ 33
ಗ್ರೂಪ್-ಬಿ 17
ಗ್ರೂಪ್-ಸಿ(ಕಾರ್ಯಕಾರಿ) 12
ಗ್ರೂಪ್-ಸಿ (ಲಿಪಿಕ) 23
ಗ್ರೂಪ್-ಡಿ 15