

ವಿಜಯವಾಣಿ ಸುದ್ದಿಜಾಲ ಕೆಜಿಎಫ್
ಕೃತಕ ರಾಸಾಯನಿಕಗಳನ್ನು ಬಳಸುತ್ತಿದ್ದ ನಗರದ ಹೊಟೆಲ್ಗಳು, ಬೇಕರಿ, ಪಾನಿಪುರಿ ಅಂಗಡಿಗಳ ಮೇಲೆ ಗುರುವಾರ ದಾಳಿ ಮಾಡಿರುವ ಪೌರಾಯುಕ್ತ ಪವನ್ಕುಮಾರ್ ನೇತೃತ್ವದ ತಂಡ ರಾಸಾಯನಿಕಗಳನ್ನು ವಶಕ್ಕೆ ಪಡೆದ ಎಚ್ಚರಿಕೆ ನೀಡಿದರು. ನಗರದ ಎಂ.ಜಿ.ಮಾರುಕಟ್ಟೆ, ಕುವೆಂಪು ಬಸ್ ನಿಲ್ದಾಣ, 2ನೇ ಕ್ರಾಸ್, 3ನೇ ಕ್ರಾಸ್, ಗೀತಾ ರಸ್ತೆ ಸೇರಿ ಇನ್ನಿತರ ಕಡೆಗಳಲ್ಲಿ ಆರೋಗ್ಯ ನಿರೀಕ್ಷಕರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದು, ದಂಡ ವಿಧಿಸಲಾಗಿದೆ.
ಪೌರಾಯುಕ್ತ ಪವನ್ಕುಮಾರ್ ಮಾತನಾಡಿ, ಸರ್ಕಾರದ ನಿಯಗಳನ್ನು ಗಾಳಿಗೆ ತೂರಿರುವ 9 ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 1ಲಕ್ಷ ರೂ.ದಂಡ ವಿಧಿಸಲಾಗಿದೆ. ಅಂಗಡಿ ಮಾಲೀಕರು ದುಡ್ಡು ಮಾಡುವ ಉದ್ದೇಶದಿಂದ ಗ್ರಾಹಕರಿಗೆ ಕಲಬೆರಕೆ ವಸ್ತುಗಳನ್ನು ಆಹಾರ ಪದಾರ್ಥಗಳಲ್ಲಿ ಮಿಶ್ರಣ ಮಾಡಿ ನೀಡುತ್ತಿದ್ದಾರೆ. ಅಲ್ಲದೇ ಅಂಗಡಿಯೊಂದರಲ್ಲಿ ಅವಧಿ ಮೀರಿರುವ ಕೃತಕ ರಾಸಾಯನಿಕಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದು, ದಾಳಿ ವೇಳೆ ಪತ್ತೆ ಮಾಡಲಾಗಿದೆ. ಈಗಾಗಲೇ ಎರಡ್ಮೂರು ವರ್ಷಗಳಿಂದ ನಗರಸಭೆಯಿಂದ ಕಲಬೆರಕೆ ವಸ್ತುಗಳನ್ನು ಆಹಾರ ಪದಾರ್ಥಗಳಿಗೆ ಮಿಶ್ರಣ ಮಾಡಿ ಮಾರಾಟ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದರೂ ಸಹ ಕೆಲವು ಅಂಗಡಿ ಮಾಲೀಕರು ನಿಯಮ ಉಲ್ಲಂಸಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ ಎಂದರು.
ಹೊಟೆಲ್ಗಳು, ಬೇಕರಿಗಳು, ಐಸ್ಕ್ರೀಂ ಪಾರ್ಲರ್ಗಳು ಮೊದಲಾದ ಕಡೆ ತಿಂಡಿ ತಿನಿಸುಗಳನ್ನು ಸೇವಿಸುವ ಮುನ್ನ ಗ್ರಾಹಕರು ಕಾಳಜಿ ವಹಿಸಬೇಕು. ದಾಳಿಯ ವೇಳೆ ಸ್ಥಳದಲ್ಲೇ ದಂಡ ಕಟ್ಟಿಸಿಕೊಳ್ಳುತ್ತಿದ್ದು, ಯಾವ ಅಂಗಡಿ ಮಾಲೀಕರು ದಂಡ ಕಟ್ಟಲು ಸಾಧ್ಯವಾಗಿಲ್ಲವೋ ಅಂತಹವರಿಗೆ ರಸೀದಿ ನೀಡಲಾಗಿದ್ದು, ಲೋಕ ಅದಾಲತ್ನಲ್ಲಿ ನಗರಸಭೆಗೆ ಕಟ್ಟಬೇಕಾಗಿರುವ ದಂಡವನ್ನು ಕಟ್ಟಿದ ಬಳಿಕ ಪ್ರಕರಣ ವಿಲೇ ಮಾಡಲಾಗುವುದು ಎಂದು ತಿಳಿಸಿದರು.
ಎರಡ್ಮೂರು ದಿನಗಳ ಹಿಂದೆ ಆರೋಗ್ಯ ನಿರೀಕ್ಷಕರು ಹೊಟೆಲ್ಗಳು, ಬೇಕರಿ ಮೊದಲಾದ ಅಂಗಡಿಗಳವರಿಗೆ ಕೃತಕ ರಾಸಾಯನಿಕಗಳನ್ನು ಬಳಸಬಾರದು ಎಂದು ಸೂಚನೆ ನೀಡಿದ್ದು, ಇಂದು ಕೆಲವು ಹೊಟೆಲ್ಗಳವರು ಕೃತಕ ರಾಸಾಯನಿಕ ಬಳಸದೇ ತಿಂಡಿಗಳನ್ನು ತಯಾರಿಸಿದ್ದಾರೆ ಎಂದು ತಿಳಿಸಿದರು.
ನಾಗರಿಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಅಂಗಡಿಗಳವರು ತಮ್ಮ ಅಂಗಡಿ&ಮುಂಗಟ್ಟುಗಳ ಮುಂದೆ ನಾವು ಕೃತಕ ರಾಸಾಯನಿಕ ಬಳಸಿ ತಿಂಡಿ ಪದಾರ್ಥಗಳನ್ನು ತಯಾರಿಸಿದ್ದೇವೆ ಎಂದು ನಾಮಫಲಕಗಳನ್ನು ಅಳವಡಿಸಿಕೊಂಡಲ್ಲಿ ಅಂತಹ ತಿನಿಸುಗಳನ್ನು ಗ್ರಾಹಕರು ಖರೀದಿ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದ ಅವರು, ಜನಜಾಗೃತಿಯಿಂದ ಮಾತ್ರ ಈ ವಸ್ತುಗಳ ನಿಯಂತ್ರಣ ಸಾಧ್ಯವಾಗಲಿದೆ ಎಂದರು.