ಜೈನ ಶ್ವೇತಾಂಬರ ಸಮುದಾಯಕ್ಕೆ ಅಲ್ಪಸಂಖ್ಯಾತರ ಪ್ರಮಾಣಪತ್ರ ನೀಡಲು ಮಾರ್ಗಸೂಚಿ

h17-jain
Published on

ಹುಬ್ಬಳ್ಳಿ: ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಪ್ ಇಲಾಖೆಯು ಜೈನ ಶ್ವೇತಾಂಬರ ಸಮುದಾಯಕ್ಕೆ ಅಲ್ಪಸಂಖ್ಯಾತರ ಪ್ರಮಾಣ ಪತ್ರ/ ಜಾತಿ ಪ್ರಮಾಣ ಪತ್ರ ನೀಡುವ ಕುರಿತು ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದು ಸ್ವಾಗತಾರ್ಹ ಮತ್ತು ಸ್ತುತ್ಯಾರ್ಹ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಸಮನ್ವಯಕಾರ ಪಾರಸಮಲ್ ಜೈನ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಬರೀ ದಿಗಂಬರ ಜೈನ್ ಸಮಾಜಕ್ಕೆ ಅಲ್ಪಸಂಖ್ಯಾತರ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಈ ಕುರಿತು ಸಚಿವ ಜಮೀರ್ ಅಹ್ಮದ್ ಅವರ ಜತೆಗೆ ರ್ಚಚಿಸಿದ ನಂತರ ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಅವರನ್ನು ಭೇಟಿಯಾಗಲು ಸೂಚಿಸಿದರು. ಕಾರ್ಯದರ್ಶಿ ಅವರನ್ನು ಭೇಟಿಯಾದ ಬಳಿಕ ಇಲಾಖೆಯು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ ಎಂದರು.

ಜೈನ ಶ್ವೇತಾಂಬರ ಸಮುದಾಯದವರು ಸ್ವಯಂ ದೃಢೀಕರಣ (ನೋಟರಿ) ದೊಂದಿಗೆ ನೋಂದಾಯಿತ ಸಂಘ-ಸಂಸ್ಥೆಗಳಿಂದ ಶಿಫಾರಸ್ಸು ಪತ್ರ ನೀಡಿದಲ್ಲಿ ತಹಸೀಲ್ದಾರರು ಅಲ್ಪಸಂಖ್ಯಾತರ ಪ್ರಮಾಣ ಪತ್ರ ನೀಡಲಿದ್ದಾರೆ. ಕರ್ನಾಟಕ ಜೈನ್ ಅಸೋಸಿಯೇಷನ್ ಬೆಂಗಳೂರು, ಶ್ರೀ ಸಂಸ್ಥಾ ಬೆಂಗಳೂರು, ಜೈನ ಶ್ವೇತಾಂಬರ ಮೂರ್ತಿಪೂಜಕ ಮಹಾಸಂಘ ಬೆಂಗಳೂರು, ಶ್ರೀಶ್ವೇತಾಂಬರ ಸ್ಥಾನಕವಾಸಿ ಜೈನ ಮಹಾಸಂಘ ಕರ್ನಾಟಕ, ಶ್ರೀ ಜೈನ ಶ್ವೇತಾಂಬರ ತೇರಾಪಂಥ ಸಭಾ ಬೆಂಗಳೂರು ಇವರಿಂದ ಶಿಫಾರಸ್ಸು ಪಡೆಯಬೇಕು ಎಂದು ಸಲಹೆ ನೀಡಿದರು.

ಆದಿನಾಥ ಜೈನ್ ಮಂದಿರ ಹುಬ್ಬಳ್ಳಿ ಅಧ್ಯಕ್ಷ ರಮೇಶ ಬಾಫಣಾ ಮಾತನಾಡಿ, ಈ ಪ್ರಮಾಣ ಪತ್ರಗಳಿಂದ ಜೈನ ಸಮಾಜದವರಿಗೆ ಬಹಳಷ್ಟು ಅನುಕೂಲವಾಗಲಿದೆ. ಈ ಬಗ್ಗೆ ಉತ್ತರ ಕರ್ನಾಟಕದಲ್ಲಿ ಸಭೆ ಮಾಡಿ ಪ್ರಚುರಪಡಿಸುತ್ತೇವೆ. ಶಾಲಾ ದಾಖಲಾತಿಗಳಾದ ಟಿಸಿ ಮತ್ತು ಅಂಕಪಟ್ಟಿಯಲ್ಲಿ ಧರ್ಮದ ಹೆಸರು ನಮೂದಿಸುವಾಗ ಜೈನ ಸಮಾಜವೆಂದು ಸೇರಿಸಲು ರಾಜ್ಯಾದ್ಯಂತ ಜಾಗೃತಿ ಮೂಡಿಸಲಾಗುವುದು ಎಂದರು.

ಜೈನ ಸ್ಥಾನಕವಾಸಿ ಸಂಘ ಹುಬ್ಬಳ್ಳಿ ಅಧ್ಯಕ್ಷ ಉಕಚಂದ್ ಜೈನ್, ಪ್ರಮುಖರಾದ ಫುಕರಾಜ ಕಾವಡ, ಮಹೇಂದ್ರ ಪಾಲಗೋಟ, ಕಾಂತಿಲಾಲ್ ಜೈನ್, ದಿನೇಶ ಸಂಘಿ, ಬಿಪಿನ್ ಪಾಟೀಲ, ರಮೇಶ ಓಸ್ತವಾಲ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net