

ವಿಜಯಪುರ: ರಾಸಾಯನಿಕ ಬಳಕೆಗೆ ಬದಲಾಗಿ ವಿಷಮುಕ್ತವಾಗಿ ಹಾಗೂ ಯುರೋಪಿಯನ್ ರಾಷ್ಟ್ರಗಳಿಗೆ ಸಾಗಿಸಲು ರಫ್ತು ಗುಣಮಟ್ಟದ ಒಣ ದ್ರಾಕ್ಷಿ ಬೆಳೆಯಲು ಮಾರ್ಗಸೂಚಿ ರೂಪಿಸುವ ಅಗತ್ಯವಿದೆ. ಜೊತೆಗೆ ಅಧಿಕ ಇಳುವರಿ, ವಿಶಿಷ್ಟ ಸ್ವಾದ ಹೊಂದಿರುವ ಅಪಘಾನಿಸ್ತಾನ ರಾಷ್ಟ್ರದ 5-6 ದ್ರಾಕ್ಷಿ ತಳಿಗಳನ್ನು ಪರಿಚಯಿಸಲು ಯೋಜಿಸುವ ಕುರಿತು ಕೃಷಿ ಮಾರುಕಟ್ಟೆ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ನಡೆದ ದಕ್ಷಿಣ ಭಾರತದ ದ್ರಾಕ್ಷಿ ಬೆಳೆಗಾರರ ಸಭೆಯಲ್ಲಿ ನಿರ್ಧರಿಸಲಾಯಿತು.
ಭಾನುವಾರ ಸಂಜೆ ನಗರದಲ್ಲಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶ ದ್ರಾಕ್ಷಿ ಬೆಳೆಗಾರರ ಸಂಘದ ಪ್ರತಿನಿಧಿಗಳು ಒಣದ್ರಾಕ್ಷಿ ಸುದೀರ್ಘ ಚರ್ಚೆ ನಡೆಸಿದರು.
ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳದ ಅಧ್ಯಕ್ಷ ಸೋಪನ್ ಕಾಂಚನ್ ನೇತೃತ್ವದಲ್ಲಿ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿಯಾದ ದ್ರಾಕ್ಷಿ ಬೆಳೆಗಾರರು, ದಕ್ಷಿಣ ಭಾರತದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶ ರಾಜ್ಯಗಳು ದ್ರಾಕ್ಷಿ ಉತ್ಪಾದನೆಯ ಕಣಜ ಎನಿಸಿದೆ. ಆದರೆ ಇಲ್ಲಿ ಉತ್ಪಾದನೆಯಾಗುವ ಒಣದ್ರಾಕ್ಷಿಗೆ ವೈಜ್ಞಾನಿಕ ಮಿತಿಯನ್ನು ಮೀರಿ ರಾಸಾಯನಿಕ ಬಳಕೆ ಮಾಡಲಾಗುತ್ತಿದೆ, ಅಧಿಕ ಉತ್ಪಾದನೆ ಮಾಡಿದರೂ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದ್ದೇವೆ ಎಂಬ ಗಂಭೀರ ವಿಷಯದ ಕುರಿತು ದ್ರಾಕ್ಷಿ ಬೆಳೆಗಾರರು ಮುಕ್ತಮನಸ್ಸಿನಿಂದ ಚರ್ಚೆ ನಡೆಸಿದರು.
ಪ್ರಸಕ್ತ ಸಂದರ್ಭದಲ್ಲಿ ಆಫ್ರಿಕನ್ ರಾಷ್ಟ್ರಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದರೂ ತಾಂತ್ರಿಕತೆ ಇಲ್ಲದ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವರು ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಇದರ ಲಾಭ ಪಡೆಯಲು ಭಾರತೀಯ ದ್ರಾಕ್ಷಿ ಬೆಳೆಗಾರರಿಗೆ ಸುವರ್ಣಾವಕಾಶವಿದ್ದು, ಈ ನಿಟ್ಟಿನಲ್ಲಿ ಗಂಂಭೀರ ಚಿಂತನೆ ನಡೆಸಿ, ಸದೃಢ ಹೆಜ್ಜೆ ಇರಿಸಬೇಕಿದೆ ಎಂದು ಒಣದ್ರಾಕ್ಷಿ ಉದ್ಯಮಿ ಎ.ಎಸ್. ಬಿರಾದಾರ ಸಲಹೆ ನೀಡಿದರು.
ಪ್ರಸಕ್ತ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಆರೋಗ್ಯ ಪೂರಕ ಆಹಾರದ ಕುರಿತು ಹೆಚ್ಚು ಕಾಳಜಿ ಹೆಚ್ಚುತ್ತಿದೆ. ಕೃತಕ ಸಕ್ಕರೆ ಅಂಶ ಸೇರಿಸುವ ರಾಸಾಯನಿಕ ಹೊಂದಿರುವ ಒಣದ್ರಾಕ್ಷಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ವೀಕೃತವಾಗುತ್ತಿಲ್ಲ. ಹೀಗಾಗಿ ವಿಷಮುಕ್ತವಾಗಿ ಸಾವಯವದಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇರುವಂತೆ ಬೆಳೆಯುವ ಕುರಿತು ದ್ರಾಕ್ಷಿ ಬೆಳೆಗಾರರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಮಹಾರಾಷ್ಟ್ರದ ದ್ರಾಕ್ಷಿ ಬೆಳೆಗಾರರ ಸಂಘಟನೆ ಉಪಾಧ್ಯಕ್ಷ ಮಾರುತಿ ಚವಾಣ್ ಹೇಳಿದರು.
ಐಐಎಚ್‌ಆರ್ ರೈತ ಪ್ರತಿನಿಧಿ ಡಾ.ಎಸ್.ಡಿ. ಶಿಖಾಮಣಿ, ದ್ರಾಕ್ಷಿ ಬೆಳೆಗಾರರ ಸಂಘಟನೆ ಉಪಾಧ್ಯಕ್ಷ ಅನಿಲ ಮೆಹರೆ, ಬಿ.ಎಂ.ಕೋಕರೆ, ಪ್ರಕಾಶ ಗಣಿ, ಮಲ್ಲಿಕಾರ್ಜುನ ತುಂಗಳ ಮತ್ತಿತರರಿದ್ದರು.