

ಹುಬ್ಬಳ್ಳಿ : ಪ್ರಯಾಣಿಕರ ಅನುಕೂಲತೆಗಾಗಿ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಮಹತ್ತರ ಹೆಜ್ಜೆ ಇಟ್ಟಿದ್ದು, ಎಸ್ಎಸ್ಎಸ್ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ‘ಮಾರ್ಗದರ್ಶಕ್’ ಎಂಬ ಡಿಜಿಟಲ್ ನಕ್ಷೆ ಹಾಗೂ ನ್ಯಾವಿಗೇಶನ್ ವ್ಯವಸ್ಥೆಯನ್ನು ಪರಿಚಯಿಸಿದೆ.
ಇದು ಬಳಕೆದಾರ ಸ್ನೇಹಿಯಾಗಿದ್ದು, ನಿಲ್ದಾಣದ ಪ್ರವೇಶದ ಬಳಿ 43 ಇಂಚಿನ ಟಚ್ ಸ್ಕ್ರೀನ್ ಕಿಯೋಸ್ಕ್ ಅಳವಡಿಸಲಾಗಿದೆ. ಈ ಕಿಯೋಸ್ಕ್ ಮೂಲಕ ಪ್ರಯಾಣಿಕರು ನಿಲ್ದಾಣದ ನಕ್ಷೆಯನ್ನು ಬಳಸಿಕೊಂಡು ಪ್ಲಾಟ್ಫಾಮ್ಗಳು, ಮೆಟ್ಟಿಲು ಸೇತುವೆಗಳು, ಎಸ್ಕಲೇಟರ್ಗಳು, ಕುಡಿಯುವ ನೀರಿನ ಸೌಲಭ್ಯ, ನಿರೀಕ್ಷಣಾ ಕೊಠಡಿಗಳು, ಆಹಾರ ಮಳಿಗೆಗಳು ಮತ್ತು ಇತರ ಸೌಲಭ್ಯಗಳನ್ನು ಸುಲಭವಾಗಿ ಕಂಡುಹಿಡಿಯಬಹುದು. ಇದು ನಿಲ್ದಾಣದೊಳಗಿನ ಗೂಗಲ್ ಮ್ಯಾಪ್ನಂತೆ ಕಾರ್ಯನಿರ್ವಹಿಸುತ್ತದೆ.
ಮಾರ್ಗದರ್ಶಕ್ನ ಪ್ರಮುಖ ವೈಶಿಷ್ಟ್ಯಗಳು: 24/7 ಮಾದರಿಯಲ್ಲಿ ಕಾರ್ಯನಿರ್ವಹಿಸುವ ಸ್ವಸಹಾಯ ಪದ್ಧತಿಯ ಟಚ್ ಸ್ಕ್ರೀನ್ ಕಿಯೋಸ್ಕ್ ಒಳಗೊಂಡಿದೆ. ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಬಹá-ಭಾಷೀಯ ವ್ಯವಸ್ಥೆ ಹೊಂದಿದೆ. ವೈಯಕ್ತೀಕರಿಸಿದ ನ್ಯಾವಿಗೇಷನ್ನೊಂದಿಗೆ ನಿಲ್ದಾಣದ ವರ್ಚುವಲ್ ಟೂರ್ ಸೌಲಭ್ಯವಿದೆ. ನಿಲ್ದಾಣದ ವಿವಿಧ ಭಾಗಗಳಲ್ಲಿ ಕ್ಯೂಆರ್ ಕೋಡ್ಗಳ ಮೂಲಕ ಮೊಬೈಲ್ನಲ್ಲಿಯೂ ಮಾರ್ಗದರ್ಶಕ್ ಸ್ಮಾರ್ಟ್ ಡಿಜಿಟಲ್ ನ್ಯಾವಿಗೇಶನ್ ವ್ಯವಸ್ಥೆ ಬಳಕೆ ಮಾಡಬಹುದಾಗಿದೆ.
ಪ್ರಯಾಣಿಕರು ತಮ್ಮ ಮೊಬೈಲ್ ಫೋನ್ ಮೂಲಕ ಕ್ಯೂಆರ್ ಕೋಡ್ ಅನ್ನು ಸ್ಕಾ್ಯನ್ ಮಾಡಿ ನಕ್ಷೆಗೆ ಪ್ರವೇಶ ಪಡೆದು, ತಮ್ಮ ಸ್ಥಳವನ್ನು ಗುರುತಿಸಿ, ನಿಲ್ದಾಣದೊಳಗೆ ಸುಲಭವಾಗಿ ಸಂಚರಿಸಬಹುದು.
ಈ ಸ್ಮಾರ್ಟ್ ವ್ಯವಸ್ಥೆಯ ಉದ್ದೇಶವೆಂದರೆ ಪ್ರಯಾಣಿಕರಿಗೆ ಗೊಂದಲ ತಪ್ಪಿಸುವುದು, ಸಮಯ ಉಳಿಸುವುದು ಮತ್ತು ಒಟ್ಟಾರೆ ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವುದು. ಹುಬ್ಬಳ್ಳಿ ವಿಭಾಗವು ಈ ಸೌಲಭ್ಯವನ್ನು ಭವಿಷ್ಯದಲ್ಲಿ ಧಾರವಾಡ, ಬೆಳಗಾವಿ, ಬಳ್ಳಾರಿ, ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ವಾಸ್ಕೊ ಮತ್ತಿತರ ಪ್ರಮುಖ ನಿಲ್ದಾಣಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ.