ಶಿಕ್ಷಕರು ಶಿಸ್ತು, ತಾಳ್ಮೆ ಬೆಳೆಸಿಕೊಳ್ಳಲಿ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು

Guidance workshop on competitive exams Mandya
Published on

ಮಂಡ್ಯ: ಶಿಕ್ಷಕ ವೃತ್ತಿಗೆ ಬರುವವರು ಶಿಸ್ತು, ಸಂಯಮ ಮತ್ತು ತಾಳ್ಮೆಯನ್ನು ಬೆಳೆಸಿಕೊಳ್ಳಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದರು.

ನಗರದ ಕೃಷಿಕ್ ಸರ್ವೋದಯ ಟ್ರಸ್ಟ್‌ನ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದಲ್ಲಿ ಎಇಟಿ ಮಹಾ ಶಿಕ್ಷಣ ವಿದ್ಯಾನಿಲಯ ಹಾಗೂ ಭಾರತಿ ಶಿಕ್ಷಣ ಮಹಾವಿದ್ಯಾನಿಲಯದ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕುರಿತ ಮಾಹಿತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ದೇಶಕ್ಕೆ ಭದ್ರ ಭವಿಷ್ಯ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದರು.

ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕಠಿಣ ಪರಿಶ್ರಮವಿಲ್ಲದೆ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಸಮಾಜದ ಬಹುತೇಕ ಸಮಸ್ಯೆಗಳಿಗೆ ಶಿಕ್ಷಣದಲ್ಲಿ ಉತ್ತರವಿದ್ದು, ಶಾಲೆಗೆ ದಾಖಲಾದ ಪ್ರತಿ ಮಕ್ಕಳಿಗೂ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಿ ಸಮಾಜದ ಉತ್ತಮ ಪ್ರಜೆಗಳಾಗಿ ರೂಪಿಸಬೇಕಾದ ಜವಾಬ್ದಾರಿ ಇದೆ. ಶಿಕ್ಷಕರಿಲ್ಲದ ಸಮಾಜವನ್ನು ಊಹಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ಮಕ್ಕಳಲ್ಲಿ ಅಕ್ಷರ ಜ್ಞಾನ, ಸಾಮರ್ಥ್ಯ ಮತ್ತು ವ್ಯಕ್ತಿತ್ವದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿ ಮತ್ತೊಬ್ಬರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಭಾವನೆ ಹೆಚ್ಚಿಸುತ್ತದೆ. ಹೀಗಾದರೆ ಮಾತ್ರ ಶಿಕ್ಷಣಕ್ಕೆ ಮೌಲ್ಯ ಬರುತ್ತದೆ. ಆಧುನಿಕ ಕಾಲದಲ್ಲಿ ಮಾನವ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಯಾರು ಜೀವನದಲ್ಲಿ ನಿರಾಸೆಗೊಳಗಾಗದೆ ಜೀವನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು. ಮಕ್ಕಳ ವಯಸ್ಸು ಮತ್ತು ಆಸಕ್ತಿಗೆ ಅನುಗುಣವಾಗಿ ಸಾಮಾಜಿಕ, ಪ್ರಾಕೃತಿಕ, ನೈತಿಕ ಮಾನವೀಯ ಹಾಗೂ ಮಾನಸಿಕ ದೃಢತೆಯ ಹೆಚ್ಚಿಸುವಂತಹ ಶಿಕ್ಷಣವನ್ನು ನೀಡಬೇಕೆಂದು ಕಿವಿಮಾತು ಹೇಳಿದರು.

ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕೃಷಿಕ್ ಫೌಂಡೇಷನ್ ಟ್ರಸ್ಟಿಗಳಾದ ಡಾ.ರಾಮಲಿಂಗಯ್ಯ, ದೇವರಾಜು, ಲೋಕೇಶ್, ಶೈಕ್ಷಣಿಕ ಸಂಯೋಜಕ ವಿಶ್ವನಾಥ್, ಸಹಾಯಕ ಪ್ರಾಧ್ಯಾಪಕರಾದ ಧರ್ಮೇಶ್, ಗಂಗೇಗೌಡ, ರಕ್ಷಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net