

ಗಜೇಂದ್ರಗಡ: ಮುಂಬರುವ ಕೇಂದ್ರದ ಜನಗಣತಿ ಹಾಗೂ ರಾಜ್ಯ ಜಾತಿ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯಿತರು ಏನು ಬರೆಸಬೇಕು ಎಂಬುದನ್ನು ಎಲ್ಲರೂ ಒಟ್ಟಾಗಿ ಚರ್ಚಿಸಿ ತೀರ್ಮಾನಕ್ಕೆ ಬರಬೇಕಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಮೈಸೂರು ಮಠದಲ್ಲಿ ಭಾನುವಾರ ಆಯೋಜಿಸಿದ್ದ ಗಜೇಂದ್ರಗಡ-ಉಣಚಗೇರಿ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ 13ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾತಿ ಗಣತಿ ಮಾಡುವ ನಿರ್ಧಾರ ಮಾಡಿವೆ. ರಾಜ್ಯದಲ್ಲಿ 1.70 ಕೋಟಿ ಇದ್ದ ವೀರಶೈವ ಲಿಂಗಾಯತರು ಕೇವಲ 70 ಲಕ್ಷಕ್ಕೆ ಬಂದು ನಿಂತಿದ್ದೇವೆ. ಇದರಲ್ಲಿ ನಮ್ಮದು ತಪ್ಪಿರಬಹುದು. ಇಂತಹ ಸಭೆಗಳಲ್ಲಿ ಈ ಕುರಿತು ಚಿಂತನೆ ಮಾಡುವುದು ಅವಶ್ಯ. ನಮ್ಮನ್ನು ಬಿಟ್ಟು ಯಾರೂ ರಾಜ್ಯದಲ್ಲಿ ಆಡಳಿತ ಮಾಡಲಿಕ್ಕೆ ಸಾಧ್ಯ ಆಗಬಾರದು. ಆದರೆ, ನಮ್ಮಲ್ಲಿ ಒಗ್ಗಟ್ಟಿಲ್ಲ. ಪೂಜ್ಯರು ನಮಗೆ ಮಾರ್ಗದರ್ಶನ ಮಾಡಬೇಕು. ನಾವೆಲ್ಲ ಒಂದಾಗಬೇಕಿದೆ ಎಂದರು.
ಸಮಾಜದ ಅಧ್ಯಕ್ಷ ಯು.ಎಫ್. ಮೆಣಸಗಿ, ಬಿ.ಎಸ್. ಶೀಲವಂತರ, ವೀರಣ್ಣ ಶೆಟ್ಟರ್, ಡಾ.ಬಿ.ವಿ. ಕಂಬಳ್ಯಾಳ ಹಾಗೂ ಅಂದಪ್ಪ ಜವಳಿ ಮಾತನಾಡಿದರು. ಕುದರಿಮೋತಿ ಮೈಸೂರು ಸಂಸ್ಥಾನ ಮಠದ ವಿಜಯಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎ.ಸಿ. ಮುನವಳ್ಳಿ, ಬಿ.ಎ. ಬೆಲ್ಲದ, ಎಂ.ಜಿ. ಸಂಗಳದ, ಎಸ್.ಎಸ್. ವಾಲಿ, ಮಹಿಳಾ ಘಟಕದ ಗೌರಾವಧ್ಯಕ್ಷೆ ಸುವರ್ಣಾ ನಂದಿಹಾಳ, ಅಧ್ಯಕ್ಷೆ ಕೀರ್ತಿ ಕೊಟಗಿ, ಯುವ ಘಟಕ ಅಧ್ಯಕ್ಷ ಅವಿನಾಶ ಕೊಟಗಿ, ಅಂದಪ್ಪ ಸಂಕನೂರ, ಭರತ ನೂಲ್ವಿ, ಮಂಜುನಾಥ ಅಂಗಡಿ, ಮುತ್ತಣ್ಣ ಚಟ್ಟೇರ, ಮಹಾಂತೇಶ ಅರಳಿ, ಮಹಾಂತೇಶ ಮಳಗಿ, ಹುಚ್ಚಪ್ಪ ಹಾವೇರಿ, ಮಹಾಂತೇಶ ಪಟ್ಟಣಶೆಟ್ಟರ, ಸಿದ್ದು ಬಳಿಗೇರ, ಶರಣಪ್ಪ ರಂಜಣಗಿ ಇತರರು ಇದ್ದರು.