ಗುರಿ ಸಾಧನೆಗೆ ಗುರುಗಳ ಮಾರ್ಗದರ್ಶನ ಅಗತ್ಯ : ಡಾ.ಸಿ.ಜಿ. ಬೆಟಸೂರಮಠ

jss
Published on

ಮೈಸೂರು: ಗುರಿ ಸಾಧನೆಗೆ ಗುರುಗಳ ಮಾರ್ಗದರ್ಶನ ಅತ್ಯಂತ ಅಗತ್ಯ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅಭಿಪ್ರಾಯಪಟ್ಟರು.

ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ದೀಕ್ಷಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿ, ದೇವರಿಗಿಂತ ಗುರು ದೊಡ್ಡವರು. ಏಕೆಂದರೆ ದೇವರ ಕಡೆಗೆ ಸಾಗುವ ಮಾರ್ಗವನ್ನು ಗುರು ನಮ್ಮೆಲ್ಲರಿಗೂ ತೋರಿಸಿ ಕೊಡುತ್ತಾನೆ. ಗುರುವೇ ನಮ್ಮೆಲ್ಲರಿಗೆ ದೇವರು ಇದ್ದಂತೆ ಎಂದು ಹೇಳಿದರು.

21ನೇ ಶತಮಾನವು ಅವಕಾಶಗಳ ಯುಗವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ನಮಗೆ ಸಾಕಷ್ಟು ಅವಕಾಶಗಳು ದೊರೆಯುತ್ತದೆ. ಯಾವುದನ್ನು ಆಯ್ಕೆ ಮಾಡಬೇಕು ಎಂಬುದೇ ದೊಡ್ಡ ಗೊಂದಲದ ಪ್ರಶ್ನೆ. ಈ ಆಯ್ಕೆಯ ಜತೆಗೆ ಸಮಸ್ಯೆಗಳು, ಸವಾಲುಗಳು ಸಹ ಎದುರಾಗುತ್ತದೆ. ಅವುಗಳನ್ನು ಎದುರಿಸುವ ಸಾಮರ್ಥ್ಯ, ಕೌಶಲವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಸಿ. ನಾಗಣ್ಣ ಮಾತನಾಡಿ, ಓದುವ ಸಂಸ್ಕೃತಿ ನಮ್ಮ ನಾಗರಿಕತೆಯ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಓದುವುದು ದೃಢವಾದ ಆತ್ಮವಿಶ್ವಾಸ, ವಿಮರ್ಶಾತ್ಮಕ ಚಿಂತನೆ ಮತ್ತು ಶಬ್ದಕೋಶವನ್ನು ಸುಧಾರಿಸುತ್ತದೆ . ವಿದ್ಯಾರ್ಥಿಗಳು ಓದುವ ಕಲೆ ಮತ್ತು ಬರೆಯುವ ಕಲೆಯನ್ನು ರೂಢಿಸಿಕೊಳ್ಳಬೇಕು. ಓದಿನ ಸಂಸ್ಕೃತಿ ಬೆಳೆಯಲು ಉತ್ತಮವಾದ ವಾತಾವರಣ ಬೇಕಾಗಿದೆ. ಇಂತಹ ವಾತಾವರಣ ಈ ಕಾಲೇಜಿನಲ್ಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ವಿದ್ಯಾರ್ಥಿಗಳಿಗೆ ಪುಸ್ತಕ ಓದು ಮುಖ್ಯವಾಗಬೇಕು. ಓದುವುದು ಕುತೂಹಲವು ಆಜೀವ ಕಲಿಕೆಯನ್ನು ಬೆಳೆಸುತ್ತದೆ ಎಂದು ಹೇಳಿದರು. ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲ ರೇಚಣ್ಣ, ಕಾರ್ಯಕ್ರಮ ಸಂಚಾಲಕ ಅಭಿಜೀತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net