ವಿಶ್ವದರ್ಶನ ನವೋದ್ಯಮ ಮಾರ್ಗದರ್ಶಿಯಿಂದ ಸ್ಟಾರ್ಟ್​ಅಪ್ ವ್ಯವಹಾರಕ್ಕೆ ಮಾರ್ಗದರ್ಶನ

Hariprakash Konemane Pressmeet
Published on

ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಮೂಹದ ವಿಶ್ವದರ್ಶನ ನವೋದ್ಯಮ ಮಾರ್ಗದರ್ಶಿ, ವಿಶ್ವದರ್ಶನ ಸೇವಾದ ಉದ್ಯಮ ಪ್ರಕಲ್ಪದಿಂದ ಸ್ಟಾರ್ಟ್​ಅಪ್ ವ್ಯವಹಾರಕ್ಕೆ ಮಾರ್ಗದರ್ಶನ ನೀಡುವ ವಿಷನ್ (ವಿಶ್ವದರ್ಶನ ಇನಿಷಿಯೇಟಿವ್ ಫಾರ್ ಸ್ಟಾರ್ಟಪ್ಸ್, ಇನ್ನೋವೇಷನ್ ಆಂಡ್ ಅಪಾರ್ಚುನಿಟೀಸ್ ನೆಟ್ವರ್ಕ್) ಆರಂಭಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.

ಸಂಸ್ಥೆಯ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಉತ್ತರ ಕನ್ನಡ ಅಗಾಧವಾದ ಪ್ರಕೃತಿ ಸಂಪತ್ತು ಹಾಗೂ ಪ್ರತಿಭಾವಂತ ಮಾನವ ಸಂಪತ್ತನ್ನು ಹೊಂದಿರುವ ಜಿಲ್ಲೆ. ಇಲ್ಲಿ ರಾಜ್ಯದಲ್ಲೇ ಅತ್ಯಂತ ಸೃಜನಶೀಲರೆನ್ನಬಹುದಾದ ವ್ಯಕ್ತಿಗಳಿದ್ದಾರೆ. ಹೊಸ ಹೊಸ ಆಲೋಚನೆಗಳನ್ನು ಹೊತ್ತ ಯುವಕ ಯುವತಿಯರಿದ್ದಾರೆ. ಇಲ್ಲಿ ನವೋದ್ಯಮಗಳನ್ನು ಸ್ಥಾಪಿಸಲು ವಿಪುಲ ಅವಕಾಶಗಳಿವೆ. ಆದರೆ ಸೂಕ್ತ ಮಾಹಿತಿಗಳ ಕೊರತೆ, ವ್ಯಕ್ತಿಗತ ಬೆಂಬಲ, ರಾಜ್ಯದ ರಾಜಧಾನಿಯಿಂದ ಇರುವ ಅಂತರ ಮುಂತಾದ ಕಾರಣಗಳಿಂದಾಗಿ ತಮ್ಮ ನವೀನ ಆಲೋಚನೆಗಳನ್ನು ನವೋದ್ಯಮಗಳನ್ನಾಗಿ ಪರಿವರ್ತಿಸಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಈ ಕೊರತೆಗಳನ್ನು ನೀಗಿಸಿ ಸೃಜನಶೀಲ ಆಲೋಚನೆಗಳುಳ್ಳ ನಮ್ಮ ಜಿಲ್ಲೆಯ ಪ್ರತಿಭಾವಂತರನ್ನು ನವೋದ್ಯಮಿಗಳನ್ನಾಗಿ ಯಶಸ್ವಿಗೊಳಿಸಬೇಕೆನ್ನುವ ಹಂಬಲದೊಂದಿಗೆ ವಿಶ್ವದರ್ಶನ ನವೋದ್ಯಮ ಮಾರ್ಗದರ್ಶಿ ಕೆಲಸ ಮಾಡಲಿದೆ ಎಂದರು.

ಆಸಕ್ತರಿಗೆ ಸುವರ್ಣಾವಕಾಶ

ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದು, ಯಾವುದಾದರೂ ವಿನೂತನ ಮಾದರಿಯ ಉತ್ಪನ್ನ ತಯಾರಿಕೆಯ ಆಲೋಚನೆ ಅಥವಾ ವಿನೂತನ ವ್ಯಾಪಾರ ಪರಿಕಲ್ಪನೆ ಹೊಂದಿದ್ದಲ್ಲಿ, ಅಂಥವರ ಸ್ಟಾರ್ಟ್​ಅಪ್ ಅಲೋಚನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಕರಿಸುವ ಉದ್ದೇಶ ಹೊಂದಿದ್ದೇವೆ. ಸ್ಟಾರ್ಟಪ್ ವ್ಯವಸ್ಥೆಯೊಳಗೆ ಪ್ರವೇಶಿಸುವುದಕ್ಕೆ ಬೇಕಾದ ಅಮೂಲ್ಯ ಸಲಹೆ ಮತ್ತು ಬೆಂಬಲವನ್ನು ನೀಡುವ ಮಾರ್ಗದರ್ಶಕರು, ಅನುಭವಿ ಉದ್ಯಮಿಗಳ ಸಹಕಾರ ಮತ್ತು ಪ್ರತಿಯೊಬ್ಬರ ಅಗತ್ಯಗಳಿಗನುಗುಣವಾಗಿ ವಿನ್ಯಾಸಗೊಳಿಸಲಾದ ವಿಶೇಷ ನವೋದ್ಯಮ ಮಾರ್ಗದರ್ಶಿ ಕಾರ್ಯಕ್ರಮ ಇದಾಗಿದ್ದು, ಆಸಕ್ತರಿಗೆ ಸುವರ್ಣಾವಕಾಶವಾಗಿದೆ ಎಂದರು.

ನವೋದ್ಯಮ ಮಾರ್ಗದರ್ಶಕ ಪ್ರವೀಣಕುಮಾರ ಮಾವಿನಕಾಡು ಮಾತನಾಡಿ, ಆಹಾರೋತ್ಪನ್ನ, ಆಹಾರ ಸಂಸ್ಕರಣೆ, ಪ್ರವಾಸೋದ್ಯಮ, ಕೃಷಿ ತಂತ್ರಜ್ಞಾನ ಮತ್ತು ತೋಟಗಾರಿಕೆ, ಶಿಕ್ಷಣ, ಆರೋಗ್ಯ, ಇಂಧನ, ಸೌರಶಕ್ತಿ, ಜೈವಿಕ ಇಂಧನ, ಮಾರುಕಟ್ಟೆ ವ್ಯವಸ್ಥೆ ನಮ್ಮ ಆದ್ಯತಾ ವಲಯಗಳಾಗಿವೆ.

ನವೋದ್ಯಮ ಮಾರ್ಗದರ್ಶಿ ಕಾರ್ಯಕ್ರಮದ ಮೂಲಕ ನವೋದ್ಯಮಿಗಳಿಗೆ ನವೋದ್ಯಮ ನೋಂದಣಿಗೆ ಬೇಕಾದ ಅಗತ್ಯ ಸಲಹೆಗಳು ಮತ್ತು ಸಹಕಾರ, ಪೇಟೆಂಟ್, ಟ್ರೇಡ್​ವಾರ್ಕ್, ಬೌದ್ಧಿಕ ಆಸ್ತಿಗಳ ಕುರಿತು ಮಾಹಿತಿ, ಸಮಾನ ಮನಸ್ಕ ನವೋದ್ಯಮಿಗಳೊಂದಿಗೆ ನೆಟ್​ವರ್ಕಿಂಗ್ ಅವಕಾಶಗಳು, ಹಣಕಾಸು ಸೌಲಭ್ಯಗಳ ಕುರಿತ ಮಾಹಿತಿ ಮತ್ತು ಸಹಕಾರ, ಉದ್ಯಮಿಗಳೊಂದಿಗೆ ಭೇಟಿ, ಉದ್ಯಮ ಸ್ಥಳಗಳಿಗೆ ಭೇಟಿ, ವಿಶೇಷ ನವೋದ್ಯಮ ಶಿಬಿರಗಳ ಮೂಲಕ ಪೋ›ತ್ಸಾಹ, ಸಹಕಾರ ನೀಡಲಿದ್ದೇವೆ ಎಂದು ವಿವರಿಸಿದರು.

ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿನೂತನ ಮಾದರಿಯ ಉತ್ಪನ್ನ ತಯಾರಿಕೆಯ ಅಥವಾ ವ್ಯಾಪಾರದ ಆಲೋಚನೆ ಹೊಂದಿದ್ದು, ನವೋದ್ಯಮಿಯಾಗುವ ಕನಸಿರಬೇಕು. 20 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು visionstartupseva@gmail.com ಗೆ ಮಾಹಿತಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ 9343588544, 9739999721, 9448323324 ಸಂಪರ್ಕಿಸಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net