

ವಿಜಯವಾಣಿ ಸುದ್ದಿಜಾಲ ಆನೇಕಲ್
ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ನಾಯಕತ್ವ ಗುಣ ಮೈಗೂಡಿಸಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶಿಕ್ಷಣ ತಜ್ಞ ಜಿ.ಮುನಿರಾಜು ಹೇಳಿದರು.ಪಟ್ಟಣದ ಇನ್ವಾಲ್ ಸ್ವಯಂ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿ ನಾಯಕ-ನಾಯಕಿಯರ ಮಾರ್ಗದರ್ಶಿ ಸಮ್ಮೇಳನದಲ್ಲಿ ಮಾತನಾಡಿ, ಸಾಮಾನ್ಯ ವ್ಯಕ್ತಿಗೆ ಪ್ರೋತ್ಸಾಹ ಮತ್ತು ಪ್ರೇರಣೆ ನೀಡಿ ಅವರೊಳಗಿರುವ ಅತಃಶಕ್ತಿಯನ್ನು ವೃದ್ಧಿಸುವುದೇ ನಿಜವಾದ ಶಿಕ್ಷಣದ ಉದ್ದೇಶವಾಗಿದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಗೋವಿಂದರಾಜು ಮಾತನಾಡಿ, ಸಮಾಜ ಪರಿವರ್ತನೆಯಾಗಬೇಕಾದರೆ ಬೋಧನೆಯ ಜತೆ ಜತೆಗೆ ಕಾರ್ಯಪ್ರವೃತ್ತಬೇಕಾಗಿರುವುದು ಅಗತ್ಯ ಎಂದು ಹೇಳಿದರು.ಸರ್ಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಅಂಕಪಟ್ಟಿಯಿಂದ ಮಾತ್ರ ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸೃಜನಶೀಲತೆ ಮೈಗೂಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು. ಹರಪನಹಳ್ಳಿಯ ಸಿ.ಪಿ. ಪರಿಮಳಾ ಮಾತನಾಡಿದರು. ಸಂಸ್ಥೆಯ ಸಿಇಒ ದೀವಾಂಶು ಕುಮಾರ್, ಆನೇಕಲ್ ಸಿಆರ್‌ಪಿಗಳಾದ ಅಸುಂತಾ, ನಸೀಂಖಾನ್, ರಾಘವೇಂದ್ರ, ಶಿಕ್ಷಕರಾದ ಬಾಲ ಸುಬ್ರಹ್ಮಣ್ಯಮ್, ರವಿ, ವಿದ್ಯಾರ್ಥಿಗಳಾದ ಜೀವನ್, ಐಶ್ವರ್ಯಾ, ಮಾರ್ಗದರ್ಶಿ ಮ್ಯಾನೇಜರ್ ಆಶಾ ಇದ್ದರು.