

ಬಳ್ಳಾರಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ಎಂ.ಎಸ್.ಶ್ರೀಕರ್ ಶುಕ್ರವಾರ ಕರೊನಾ ಸೋಂಕಿತ ವ್ಯಕ್ತಿ ವಾಸಿಸುತ್ತಿದ್ದ ನಗರದ ಗುಗ್ಗರಹಟ್ಟಿ ಪ್ರದೇಶಕ್ಕೆ ಭೇಟಿ ನೀಡಿದರು. ಗುಗ್ಗರಹಟ್ಟಿಯಲ್ಲಿ ಸರ್ಕಾರದ ನಿಯಮಗಳಂತೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಗುಗ್ಗರಹಟ್ಟಿಯಲ್ಲಿ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ಸಮೀಕ್ಷೆ ಕೈಗೊಂಡಿರುವ ಸಿಬ್ಬಂದಿಗೆ ನೀಡಲಾಗಿರುವ ಸೌಲಭ್ಯಗಳು ಹಾಗೂ ಜನರಿಗೆ ಅಗತ್ಯ ವಸ್ತುಗಳ ಲಭ್ಯತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಉಸ್ತುವಾರಿ ಕಾರ್ಯದರ್ಶಿಗೆ ಮಾಹಿತಿ ನೀಡಿದರು. ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್ ಕಾಂಡೂ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ತಹಸೀಲ್ದಾರ್ ನಾಗರಾಜ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.