ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರ ಹೋರಾಟ; ಅಗತ್ಯ ದಾಖಲೆಗಳ ಕ್ರೋಡೀಕರಣ

A teacher vvani
Published on

ರಾಜ್ಯದ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಸೇವಾ ಭದ್ರತೆಗೆ ಸಂಬಂಧಿಸಿದಂತೆ ಇದೀಗ ಕಾನೂನಿನ ಮೊರೆ ಹೋಗಿದ್ದಾರೆ. ಹಲವು ಬಾರಿ ಹೊರಾಟ ನಡೆಸಿ ಸಿಎಂ ಅವರಿಂದ ಹಿಡಿದು ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಮನವಿಯನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಿದ್ದಾರೆ. ಜತೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ರಾಜ್ಯ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವ ಪ್ರಕ್ರಿಯೆ ಎಲ್ಲ ಜಿಲ್ಲೆಗಳಲ್ಲಿಯೂ ನಡೆಯುತ್ತಿದೆ.

ಉಪನ್ಯಾಸಕರ ಬೇಡಿಕೆ ಏನು?: ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 13 ಸಾವಿರ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಡಿಮೆ ಗೌರವಧನ ಪಡೆದು ಯಾವುದೇ ಸೌಲಭ್ಯ ಪಡೆಯದೆ ಕೆಲಸ ಮಾಡುತ್ತಿರುವ ಇವರು, 2003ರಿಂದಲೂ ಸೇವಾ ಭದ್ರತೆ ಅಂದರೆ ಜೆಒಸಿ ಮಾದರಿಯಲ್ಲಿ ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸುತ್ತಲೇ ಇದ್ದಾರೆ.

ಆದರೆ, ಈವರೆಗೆ ಇವರಿಗೆ ನಿರೀಕ್ಷಿತ ಪ್ರತಿಫಲ ಸಿಕ್ಕಿಲ್ಲ. ಇನ್ನು ಪ್ರತಿ ಬಾರಿ ಉಪನ್ಯಾಸಕರ ನೇಮಕಾತಿ ವೇಳೆಯೂ ತಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜತೆಗೆ ನೇಮಕಾತಿಯಿಂದ ಅತಿಥಿ ಉಪನ್ಯಾಸಕರು ಹಂತ ಹಂತವಾಗಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ನೇತೃತ್ವದಲ್ಲಿ ತಮ್ಮ ಸಮಸ್ಯೆ ಬಗೆಹರಿಸಿಕೊಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ನ್ಯಾಯಾಧೀಶರ ಮೊರೆ ಹೋಗಿದ್ದು, ತಮ್ಮ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಸೇವಾ ಭದ್ರತೆ ಸಿಗದಿದ್ದರೆ ಅತಿಥಿ ಉಪನ್ಯಾಸಕರ ಜತೆಗೆ ಕುಟುಂಬದವರೂ ಬೀದಿಗೆ ಬೀಳಲಿದ್ದಾರೆ.

ದಾಖಲೆಗಳ ಸಿದ್ಧತೆ: ಒಂದು ವೇಳೆ ಪ್ರಾಧಿಕಾರ ಇವರ ಮನವಿ ಪುರಸ್ಕರಿಸಿದರೆ ಸಮನ್ವಯ ಸಮಿತಿ ಮೂಲಕ ಅತಿಥಿ ಉಪನ್ಯಾಸಕರು ಸೇವಾ ಪ್ರಮಾಣಪತ್ರ, ಅರ್ಹತಾ ಪ್ರಮಾಣಪತ್ರ, ಪದವಿ, ಜಾತಿ, ಅಂಗವಿಕಲ ಸೇರಿ ಎಲ್ಲ ದಾಖಲಾತಿ ಸಲ್ಲಿಸಲು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

ಪರಿಷತ್​ನಲ್ಲಿ ವಿಷಯ ಪ್ರಸ್ತಾಪ

ಬೆಂಗಳೂರು: ಅತಿಥಿ ಉಪನ್ಯಾಸಕರನ್ನು ಕೂಡಲೆ ಕಾಯಂ ಮಾಡುವಂತೆ ಜೆಡಿಎಸ್​ನ ಮರಿತಿಬ್ಬೇಗೌಡ, ಬಸವರಾಜ ಹೊರಟ್ಟಿ ವಿಧಾನಪರಿಷತ್​ನಲ್ಲಿ ಸೋಮವಾರ ಆಗ್ರಹಿಸಿದರು. 20-25 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿಯೇ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಕಾಯಂ ಮಾಡಿ ಎಂದು ಪ್ರಶ್ನೋತ್ತರ ಕಲಾಪ ವೇಳೆ ಮರಿತಿಬ್ಬೇಗೌಡ, ಒತ್ತಾಯಿಸಿದರು.

ಅದಕ್ಕೆ ಬಿಜೆಪಿಯ ಆಯನೂರು ಮಂಜುನಾಥ್ ಸೇರಿ ಪಕ್ಷಾತೀತವಾಗಿ ಸದಸ್ಯರು ಧ್ವನಿಗೂಡಿಸಿದರು. ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಉತ್ತರಿಸಿ, ಸದ್ಯ 1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಉಳಿದಂತೆ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ಸಮನ್ವಯ ಸಮಿತಿ ವಾದವೇನು?

ಸೇವಾ ಭದ್ರತೆಗೆ ಸಂಬಂಧಿಸಿದಂತೆ ಕಾನೂನಿನ ನಿಯಮಗಳಿಲ್ಲ ಎನ್ನುವುದು ಸರ್ಕಾರದ ವಾದ. ಹೀಗಿರುವಾಗ ನಮ್ಮನ್ನು ಈವರೆಗೆ ದುಡಿಸಿಕೊಂಡಿದ್ದು ಯಾವ ನಿಯಮದ ಮೇಲೆ ಎನ್ನುವುದು ಅತಿಥಿ ಉಪನ್ಯಾಸಕರ ವಾದ. ಜತೆಗೆ ಹಿಂದೆ ಜೆಒಸಿ ಶಿಕ್ಷಕರನ್ನು ಕಾಯಂ ಮಾಡಿಕೊಂಡಿದ್ದು ಅಂದಿನ ಬಿಜೆಪಿ ಸರ್ಕಾರ. ಅದೇ ರೀತಿ ಈಗ ನಮಗೂ ಸೇವಾ ಭದ್ರತೆ ನೀಡಬೇಕೆಂಬುದು ಇವರ ಮನವಿ.

ಹರಿಯಾಣ, ದೆಹಲಿ ರಾಜ್ಯದಲ್ಲಿ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಲಾಗಿದೆ. ಕೇರಳದಲ್ಲಿ ಹೆಚ್ಚು ವೇತನ ನೀಡಿ ನಿವೃತ್ತಿವರೆಗೆ ಕೆಲಸದಿಂದ ತೆಗೆಯುವುದಿಲ್ಲ ಎಂದು ತಿಳಿಸಲಾಗಿದೆ. ಹಿಂದೆ ಕರ್ನಾಟಕದಲ್ಲಿ ಮೊರಾರ್ಜಿ ವಸತಿ ಶಾಲೆಯಲ್ಲಿಯೂ ಶಿಕ್ಷಕರನ್ನು ಕಾಯಂಗೊಳಿಸಿರುವ ಉದಾಹರಣೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಬೇಡಿಕೆಗೂ ಸ್ಪಂದಿಸಬೇಕೆಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ಆಗ್ರಹ.

| ಕೆ.ಎನ್. ರಾಘವೇಂದ್ರ ಮಂಡ್ಯ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net