ಅತಿಥಿ ಉಪನ್ಯಾಸಕರಿಗೆ ವಿದ್ಯಾರ್ಥಿಗಳ ಬೆಂಬಲ

20
ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಅಥಣಿ ತಹಸೀಲ್ದಾರ್ ವಾಣಿ ಅವರಿಗೆ ಮನವಿ ಸಲ್ಲಿಸಿದರು. ರವಿಕಾಂತ ದನದಮನಿ, ರೋಹಿತ ಕಾಂಬಳೆ, ಮುರುಘೇಶ ಕಾಳಗಿ, ರೋಹಿತ ಹೊಳಿಕಟ್ಟಿ ಇದ್ದರು.
Published on

ಅಥಣಿ: ತರಗತಿಗಳು ನಡೆಯದ ಹಿನ್ನೆಲೆಯಲ್ಲಿ ಮಿನಿವಿಧಾನ ಸೌಧದ ಬಳಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಿ ತರಗತಿ ಆರಂಭವಾಗುವಂತೆ ಮಾಡಿ ಎಂದು ತಹಸೀಲ್ದಾರ್ ವಾಣಿ ಮೂಲಕ ವಿದ್ಯಾರ್ಥಿಗಳು ಮಂಗಳವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶಿವಯೋಗಿ ನಗರದಲ್ಲಿರುವ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅತಿಥಿ ಉಪನ್ಯಾಸಕರ ಮುಷ್ಕರದಿಂದ ತರಗತಿಗಳು ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭಾಸದ ಮೇಲೆ ಪರಿಣಾಮ ಬಿರುತ್ತಿದೆ. ಸರ್ಕಾರವು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ನೂರಾರು ವಿದ್ಯಾರ್ಥಿಗಳು ಆಗ್ರಹಿಸಿದರು.

ವಿದ್ಯಾರ್ಥಿಗಳಾದ ರವಿಕಾಂತ ದನದಮನಿ, ರೋಹನ ಕಾಂಬಳೆ ಮಾತನಾಡಿ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಅವರ ಬೇಡಿಕೆ ಸೂಕ್ತವಾಗಿವೆ. ಸೇವೆ ಕಾಯಂ ಮಾಡುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಮನವಿ ಮಾಡಿದರು.

ವಿದ್ಯಾರ್ಥಿಗಳ ಬದುಕು ಕತ್ತಲೆಯಲ್ಲಿ ಮುಳುಗಿದೆ. ಪಾಠಗಳಿಲ್ಲದೆ ಪರೀಕ್ಷೆಗಳನ್ನು ಎದುರಿಸುವುದಾದರೂ ಹೇಗೆ? ಸರ್ಕಾರ ಶೀಘ್ರವಾಗಿ ಉಪನ್ಯಾಸಕರ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುರುಘೇಶ ಕಾಳಗಿ, ರೋಹಿತ ಹೊಳಿಕಟ್ಟಿ, ಪಿಎಸ್‌ಐ ಶಿವಾನಂದ ಕಾರಜೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net