ಸೇವಾ ಜೇಷ್ಠತೆ ಅನುಸರಿಸಿ ಸೇವೆಯಲ್ಲಿ ಪರಿಗಣಿಸಿ: ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಒತ್ತಾಯ

Guest lecturers state coordination committee protest Mandya
Published on

ಮಂಡ್ಯ: ಯುಜಿಸಿ ಮತ್ತು ನಾನ್ ಯುಜಿಸಿ ತಾರತಮ್ಯವಿಲ್ಲದೇ ಸೇವಾ ಜೇಷ್ಠತೆ ಅನುಸರಿಸಿ ಸೇವೆಯಲ್ಲಿ ಪರಿಗಣಿಸುವಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಅತಿಥಿ ಉಪನ್ಯಾಸಕರು, ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 10,976ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಹತ್ತಾರು ವರ್ಷದಿಂದ ಅತ್ಯಂತ ಕನಿಷ್ಟ ಗೌರವಧನ ಪಡೆದು ಪ್ರಾಮಾಣಿಕತೆಯಿಂದ ಸೇವೆ ಮಾಡುತ್ತಾ ಬಂದಿದ್ದೇವೆ. ಸೇವಾ ವಿಲೀನಾತಿ, ಭದ್ರತೆ, ಗೌರವಧನ ಹೆಚ್ಚಳ ಇತರೆ ಬೇಡಿಕೆಗಳ ಸಂಬಂಧ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಅತಿಥಿ ಉಪನ್ಯಾಸಕರ ಪ್ರಸ್ತುತ ಸಮಸ್ಯೆಯನ್ನು ಸರ್ಕಾರದ ಹಂತದಲ್ಲಿ ಅಥವಾ ಸಚಿವ ಸಂಪುಟ ಸಮಿತಿಯ ಮುಂದೆ ತಂದು ಇತ್ಯರ್ಥ ಪಡಿಸಬೇಕು. ಸೇವಾ ಜೇಷ್ಠತೆ ಆಧಾರ ಮೇಲೆ ನೇಮಕ ಮಾಡಿಕೊಳ್ಳಬೇಕು. ಕಾರ್ಯಭಾರದ ಕೊರತೆ, ನೂತನ ನೇಮಕಾತಿ, ವರ್ಗಾವಣೆ ಕಲಾ, ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ, ವಿಜ್ಞಾನ, ಗಣಕ ವಿಜ್ಞಾನ, ಇತರೆ ವಿಭಾಗಗಳನ್ನು ಶೈಕ್ಷಣಿಕ ಗುಣಮಟ್ಟದ ಹಿತದೃಷ್ಟಿಯಿಂದ ತರಗತಿಗಳನ್ನು ವಿಭಜಿಸಿ ಕಾರ್ಯಭಾರ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಅಂದಿನ ಸಮಿತಿಯು ಮಾಡಿದ ಈ ಶಿಫಾರಸನ್ನು ನಮ್ಮ ಸಮಿತಿಯು ಸೇರಿದಂತೆ ಸಾವಿರಾರು ಅತಿಥಿ ಉಪನ್ಯಾಸಕರು ವಿರೋಧಿಸಿ ಪ್ರತಿಭಟನೆ ನಡೆಸಿದ್ದೆವು. ಹಾಗೆ ನೋಡಿದರೆ ಅತಿಥಿ ಉಪನ್ಯಾಸಕರ ಸಂಘಟನೆಗಳ ಬೇಡಿಕೆಗಳಿಗೆ ಇದು ವಿರುದ್ಧವಾಗಿತ್ತು. ಇದು ಕಳೆದ ಸರ್ಕಾರದ ಅವಧಿಯಲ್ಲಿ ಮಾಡಿದ ಎಡವಟ್ಟಿನಿಂದ ಇಂದು ಸಾವಿರಾರು ಅತಿಥಿ ಉಪನ್ಯಾಕರು ಬೀದಿಗೆ ಬೀಳುವಂತಾಗಿದೆ. ಸರ್ಕಾರವು ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿ ಹಾಗೂ ಪರಿಶೀಲಿಸಿ ಸೇವಾ ಜೇಷ್ಠತೆಯನ್ನು ಮಾನದಂಡವಾಗಿಟ್ಟುಕೊಂಡು ಕಾಲೇಜು ಶಿಕ್ಷಣ ಇಲಾಖೆ ಸುಮಾರು ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದ ಅತಿಥಿ ಉಪನ್ಯಾಸಕರನ್ನು ಮಾನವೀಯ ದೃಷ್ಟಿಯಿಂದ ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಮಿತಿಯ ಬಿ.ಎಸ್.ನಾಗರಾಜು, ನಂದೀಶ್, ವಿ.ಪಿ.ಸೋಮಶೇಖರ್, ಎಸ್.ಕಿರಣ್, ಟಿ.ಎನ್.ಸಂಜಯ್, ಚೇತನ್‌ಕುಮಾರ್, ಬೋರಯ್ಯ, ಶಿವಕುಮಾರ್, ಸಾಮಾಜಿಕ ಹೋರಾಟಗಾರ ಅನ್ನದಾನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net