ಅಕ್ರಮ ಹೇಳಿಕೆ ಖಂಡಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

29_HSN_03
Published on

ಹಾಸನ: ವಿಶ್ವವಿದ್ಯಾನಿಲಯದ ಸಿಂಡಿಕೇಟ್ ನಾಮನಿರ್ದೇಶಿತ ಸದಸ್ಯರೊಬ್ಬರು ಹಾಸನ ವಿವಿಯಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮ, ಭ್ರಷ್ಟಾಚಾರ ನಡೆದಿದೆ ಎಂದು ಹೇಳಿಕೆ ನೀಡಿರುವುದು ನಮಗೆ ಅತೀವ ನೋವು ತಂದಿದ್ದು, ಕೂಡಲೇ ಹೇಳಿಕೆ ವಾಪಸ್ ಪಡೆಯುವಂತೆ ಆಗ್ರಹಿಸಿ ಹೇಮಾ ಗಂಗೋತ್ರಿಯ ವಿವಿ ಆಡಳಿತ ಕಚೇರಿ ಮುಂದೆ ಅತಿಥಿ ಉಪನ್ಯಾಸಕರು ಬುಧವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಉಪನ್ಯಾಸಕಿ ಪುಷ್ಪಾವತಿ, ವಿವಿ ಸಿಂಡಿಕೇಟ್ ಸದಸ್ಯರೊಬ್ಬರು, ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಹಾಸನ ವಿವಿಯಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಕುಲಪತಿಗಳು ಮತ್ತು ಕುಲಸಚಿವರು ಅಕ್ರಮ ನಡೆಸಿದ್ದಾರೆ ಎಂದು ದೂರಿದ್ದರು. ಟೆಂಡರ್ ಕರೆಯುವಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸುಳ್ಳು ಮಾಹಿತಿ ನೀಡಿ ವಿವಿ ಗೌರವಕ್ಕೆ ಧಕ್ಕೆ ತಂದಿದ್ದು, ಅತಿಥಿ ಉಪನ್ಯಾಸಕರ ಗೌರವಕ್ಕೂ ಚ್ಯುತಿ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾವು ಯಾವುದೇ ಸಿಂಡಿಕೇಟ್ ಸದಸ್ಯರ ವಿರುದ್ಧವಾಗಿ ಹಾಗೂ ವಿವಿ ವಿರುದ್ಧವಾಗಿ ಮತ್ತು ವಿಸಿ ರಿಜಿಸ್ಟ್ರಾರ್ ವಿರುದ್ಧವಾಗಲಿ ಪ್ರತಿಭಟನೆ ಮಾಡುತ್ತಿಲ್ಲ. ಸಿಂಡಿಕೇಟ್ ಸದಸ್ಯರು ನೇಮಕ ಆದಾಗ ನಮಗೆ ಹೆಚ್ಚು ಸಂತೋಷವಾಗಿತ್ತು. ಸರ್ಕಾರದ ಮಟ್ಟದಿಂದ, ಗವರ್ನರ್ ಅವರಿಂದ ಆಯ್ಕೆ ಆಗಿರುವವರು ಉದ್ಯೋಗ ಭದ್ರತೆ, ವೇತನ ಹೆಚ್ಚಳ ಮಾಡುತ್ತಾರೆ ಎನ್ನುವ ಆಶಯದಲ್ಲಿ ನಾವಿದ್ದೆವು. ಆದರೆ ಅವರು ಈ ರೀತಿ ಹೇಳಿಕೆ ಕೊಟ್ಟಿರುವುದು ನಮಗೂ ಅಚ್ಚರಿ ಜತೆಗೆ ನೋವು ತಂದಿದೆ. ಅವರು ವಿದ್ಯಾವಂತರಾಗಿ ಇಂತಹ ಹೇಳಿಕೆ ಕೊಡ ಬಾರದಿತ್ತು ಎಂದರು.

ನಮ್ಮ ನೇಮಕಾತಿ ವೇಳೆ ನೋಟಿಫಿಕೇಶನ್ ಮಾಡಿ ಮಾನದಂಡದ ಮೂಲಕ ಸಂದರ್ಶನಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಅದಕ್ಕಾಗಿ ಆಯ್ಕೆ ಸಮಿತಿ ಸಹ ಇತ್ತು. ಆದರೂ ನಮ್ಮ ಗೌರವ ಹಾಳು ಮಾಡಿರುವುದಕ್ಕೆ ಹೋರಾಟಕ್ಕೆ ಇಳಿದಿದ್ದೇವೆ. ಕೂಡಲೇ ಅವರು ದಾಖಲಾತಿ ಪರಿಶೀಲಿಸಿ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಇಲ್ಲವಾದರೆ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಡಾ.ಎಸ್.ಜೆ. ಮಹೇಶ್, ಅಶೋಕ್, ಮಹೇಶ್, ಪುಟ್ಟರಾಜಪ್ಪ, ಷಣ್ಮುಗ, ಪ್ರೇಮ ಕುಮಾರ್, ಅಮರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net