

ತಿ.ನರಸೀಪುರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಏಳೆಂಟು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ 2024-25 ರ ಶೈಕ್ಷಣಿಕ ಸಾಲಿನಲ್ಲಿ 10 ತಿಂಗಳ ಸಂಬಳವನ್ನು ನೀಡಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಆರೋಪಿಸಿದರು.
ಕಳೆದ ಆರು ವರ್ಷಗಳ ಹಿಂದೆ ಮೆರಿಟ್ ಆಧಾರದ ಮೇಲೆ ಅತಿಥಿ ಉಪನ್ಯಾಸಕರಾಗಿ ಆಯ್ಕೆಯಾಗಿ ಉತ್ತಮ ಫಲಿತಾಂಶದೊಂದಿಗೆ ಕೆಲಸ ನಿರ್ವಹಿಸುತ್ತಿರುವ ವಿವಿಧ ವಿಷಯಗಳ 6 ಮಂದಿ ಉಪನ್ಯಾಸಕರು ಕಳೆದ ಒಂದು ವರ್ಷದಿಂದ ತಮ್ಮ ದುಡಿಮೆಯ ಸಂಬಳಕ್ಕಾಗಿ ಸರ್ಕಾರದ ಕಚೇರಿಗಳು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸ್ಥಳೀಯ ಶಾಸಕರೂ ಆದ ಡಾ.ಎಚ್.ಸಿ. ಮಹದೇವಪ್ಪ ಅವರ ಮನೆಗೆ ಹತ್ತಾರು ಬಾರಿ ಅಲೆದಿದ್ದರೂ ಅಧಿಕಾರಿಗಳಾಗಲಿ, ಸಚಿವರಾಗಲಿ ಇವರ ಕಷ್ಟಗಳಿಗೆ ಕಿವಿಗೊಡದೆ ನಿರ್ಲಕ್ಷಿಸಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ವಿದ್ಯಾವಂತ ನಿರುದ್ಯೋಗಿಗಳಾಗಿರುವ ಅತಿಥಿ ಉಪನ್ಯಾಸಕರು ತಮ್ಮ ಜೀವನ ನಿರ್ವಹಣೆಗಾಗಿ ವಾರಕ್ಕೆ 20 ಗಂಟೆಯಂತೆ ತಿಂಗಳಿಗೆ 80 ಗಂಟೆಗಳ ಕಾಲ ಸರ್ಕಾರ ನೀಡುವ 12 ಸಾವಿರ ಗೌರವಧನ ನಂಬಿ ಕೆಲಸ ಮಾಡುತ್ತಿದ್ದರೂ ಕಳೆದ ಶೈಕ್ಷಣಿಕ ಸಾಲಿನ 10 ತಿಂಗಳು ಸಂಬಳ ನೀಡದೆ ಜೀತದಾಳುಗಳಂತೆ ದುಡಿಸಿಕೊಂಡಿರುವುದು ಅಮಾನವೀಯವಾಗಿದೆ. ಕೂಡಲೇ ಇವರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಸರ್ಕಾರದ ವಿರುದ್ಧ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳ ಜತೆ ಪ್ರತಿಭಟನೆ ಅನಿವಾರ್ಯ ಎಚ್ಚರಿಸಿದರು.
ಅತಿಥಿ ಉಪನ್ಯಾಸಕ ಅಂಜನ್ ಕುಮಾರ್ ಮಾತನಾಡಿ, 6 ವರ್ಷಗಳಿಂದಲೂ ಉತ್ತಮ ಫಲಿತಾಂಶದಿಂದ ವಿವಿಧ ವಿಷಯಗಳ 6 ಜನ ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ನಮಗೆ ಸರ್ಕಾರದಿಂದಲೇ ನೇರವಾಗಿ ಸಂಬಳ ಬಿಡುಗಡೆ ಆಗುತ್ತಿದ್ದು, ಕಳೆದ ಶೈಕ್ಷಣಿಕ ಸಾಲಿನಲ್ಲಿ ನಮಗೆ ಸಂಬಳ ನೀಡದೆ 10 ತಿಂಗಳುಗಳ ಕಾಲ ಜೀತದಾಳುಗಳಾಗಿ ದುಡಿಸಿಕೊಂಡು ಈಗ ಬೀದಿಗೆ ತಳ್ಳಿರುವುದರಿಂದ ನಮಗೆ ದಿಕ್ಕು ತೋಚದಂತಾಗಿದೆ. ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರ ಕಚೇರಿ ಹಾಗೂ ಸಂಬಂಧಿಸಿದ ಸಚಿವರ ಮನೆ ಬಾಗಿಲಿಗೆ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.
ಅತಿಥಿ ಉಪನ್ಯಾಸಕರಾದ ರಾಜಮ್ಮ, ಕವಿತಾ, ಪೋಷಕರಾದ ಮಹದೇವಯ್ಯ ಇದ್ದರು.